ಇರಾನ್ ಸಿಡಿಸಿದ ಕ್ಷಿಪಣಿಯಿಂದ ಉಕ್ರೇನ್ ವಿಮಾನ ಪತನ – ಘಟನೆಯ ಸುತ್ತ ಅನುಮಾನದ ಹುತ್ತ

– ತಪ್ಪಾಗಿ ಭಾವಿಸಿ ಉಕ್ರೇನ್ ವಿಮಾನವನ್ನು ಹೊಡೆದ ಇರಾನ್
– ಅನುಮಾನ ವ್ಯಕ್ತಪಡಿಸಿದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಉಕ್ರೇನ್‍ನಿಂದ ಹೊರಟಿದ್ದ ವಿಮಾನವನ್ನು ಇರಾನ್ ತಪ್ಪಾಗಿ ತಿಳಿದುಕೊಂಡು ಹೊಡೆದು ಹಾಕಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಂಕಿಸಿದ್ದಾರೆ.

ಮೂಲಗಳನ್ನು ಆಧಾರಿಸಿ ಅಮೆರಿಕದ ಮಾಧ್ಯಮಗಳು ವರದಿ ಮಾಡಿದ್ದು, ಇರಾನಿನ ವಾಯು ಸೇನೆ ತಪ್ಪಾಗಿ ಭಾವಿಸಿಕೊಂಡು ಕ್ಷಿಪಣಿ ಬಳಸಿಕೊಂಡು ಉಕ್ರೇನ್ಇಂಟರ್‌ನ್ಯಾಷನಲ್ ಏರ್‌ಲೈನ್ಸ್‌ ಬೋಯಿಂಗ್ 737 ವಿಮಾನವನ್ನು ಹೊಡೆದು ಹಾಕಿದೆ ಎಂದು ತಿಳಿಸಿವೆ. ಟ್ರಂಪ್ ಖಚಿತವಾಗಿ ಹೇಳದೇ ಇದ್ದರೂ ಇರಾನ್ ಹೊಡೆದಿರಬಹುದು ಎಂದು ಅಂದಾಜಿಸಿದ್ದಾರೆ.

ಇರಾನ್ ರಾಜಧಾನಿ ಟೆಹ್ರಾನ್‍ನ ಇಮಾಮ್ ಖೊಮೇನಿ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದ ಉಕ್ರೇನ್ ವಿಮಾನ ತಾಂತ್ರಿಕ ಸಮಸ್ಯೆಗಳಿಂದಾಗಿ ಬುಧವಾರ ಅಪಘಾತಕ್ಕೀಡಾಗಿತ್ತು. ಈ ವಿಮಾನದಲ್ಲಿ ಸಿಬ್ಬಂದಿ ಸೇರಿ 180 ಮಂದಿಯೂ ಮೃತಪಟ್ಟಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮ ವರದಿ ಮಾಡಿತ್ತು.

ಸಾಧಾರಣವಾಗಿ ವಿಮಾನ ತಾಂತ್ರಿಕ ದೋಷದಿಂದ ಪತನಗೊಂಡು ನೆಲಕ್ಕೆ ಬಿದ್ದ ನಂತರ ಬೆಂಕಿ ಹೊತ್ತಿಕೊಳ್ಳುತ್ತದೆ. ಆದರೆ ಈ ವಿಮಾನ ಪತನಕ್ಕೂ ಮುನ್ನವೇ ಬೆಂಕಿ ಹೊತ್ತಿಕೊಂಡಿತ್ತು ಎನ್ನುವುದಕ್ಕೆ ವಿಡಿಯೋ ಸಾಕ್ಷ್ಯಗಳು ಸಿಕ್ಕಿದೆ. ವಿಮಾನ ಬೆಂಕಿಹೊತ್ತಿಕೊಂಡು ಪತನವಾಗುವುದು ಬಹಳ ಅಪರೂಪ. ಹೀಗಾಗಿ ಈ ಪ್ರಕರಣದ ಸುತ್ತ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಖಾಸಿಮ್ ಸುಲೈಮಾನಿ ಹತ್ಯೆಗೆ ಪ್ರತೀಕಾರವಾಗಿ ಇರಾಕಿನಲ್ಲಿದ್ದ ಅಮೆರಿಕದ ಎರಡು ವಾಯು ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿ ನಡೆಸಿದ ಕೆಲವೇ ಗಂಟೆಗಳ ಹೊತ್ತಿನಲ್ಲಿ ಉಕ್ರೇನ್ ವಿಮಾನ ಟೆಹ್ರಾನ್ ವಿಮಾನ ನಿಲ್ದಾಣದ ಬಳಿ ಪತನಗೊಂಡಿತ್ತು.

https://twitter.com/ShabbaAlaBiafra/status/1214839520778235904

ವಿಮಾನದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಇರಲಿಲ್ಲ. ಎರಡು ದಿನದ ಹಿಂದೆ ಪರಿಶೀಲಿಸಲಾಗಿತ್ತು. ವಿಮಾನ ಹಾರಿಸುತ್ತಿದ್ದ ಪೈಲಟ್‍ಗಳು ಅನುಭವಿಯಾಗಿದ್ದರು ಎಂದು ಕಂಪನಿ ತಿಳಿಸಿದೆ. ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ. ಆದರೆ ತನಿಖೆಗೆ ನಾವು ಬೋಯಿಂಗ್ ಕಂಪನಿ ಅಥವಾ ಅಮೆರಿಕಕ್ಕೆ ನೀಡುವುದಿಲ್ಲ. ವಿಮಾನ ಪತನದ ತನಿಖೆಯನ್ನು ನಾವೇ ಮಾಡುತ್ತೇವೆ ಎಂದು ಇರಾನ್ ಹೇಳಿಕೊಂಡಿದೆ. ಇತ್ತ ಅಮೆರಿಕವೂ ಈ ವಿಮಾನ ಪತನಕ್ಕೆ ಕಾರಣಗಳನ್ನು ಪತ್ತೆ ಹಚ್ಚುತ್ತೇವೆ ಎಂದು ತಿಳಿಸಿದೆ.

Comments

Leave a Reply

Your email address will not be published. Required fields are marked *