US Election: ಗೆಲುವಿನ ಸನಿಹದಲ್ಲಿ ಟ್ರಂಪ್‌ – ಸ್ವಿಂಗ್‌ ರಾಜ್ಯಗಳಲ್ಲಿ ಕಮಲಾ ಹ್ಯಾರಿಸ್‌ಗೆ ಹಿನ್ನಡೆ

– ತವರು ನ್ಯೂಯಾರ್ಕ್‌ನಲ್ಲೇ ಟ್ರಂಪ್‌ಗೆ ಮುಖಭಂಗ

ನ್ಯೂಯಾರ್ಕ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ನ ಡೊನಾಲ್ಡ್‌ ಟ್ರಂಪ್‌ ಐತಿಹಾಸಿಕ ಗೆಲುವು ದಾಖಲಿಸುವ ಸನಿಹದಲ್ಲಿದ್ದಾರೆ. ಚುನಾವಣೆಯಲ್ಲಿ ಹಿನ್ನಡೆಯಾಗುತ್ತಿದ್ದಂತೆ ಡೆಮಾಕ್ರಟಿಕ್‌ ಅಭ್ಯರ್ಥಿ ಕಮಲಾ ಹ್ಯಾರಿಸ್‌ ತಮ್ಮ ಚುನಾವಣಾ ರಾತ್ರಿ ಭಾಷಣವನ್ನು ರದ್ದುಗೊಳಿಸಿದ್ದಾರೆ.

ಟ್ರಂಪ್ ಅವರು ಎಲ್ಲಾ ಏಳು ಸ್ವಿಂಗ್ ರಾಜ್ಯಗಳಲ್ಲಿ ತಮ್ಮ ಎದುರಾಳಿ ಕಮಲಾ ಹ್ಯಾರಿಸ್ ಅವರಿಗಿಂತ ಮುಂದಿದ್ದಾರೆ. ಉತ್ತರ ಕೆರೊಲಿನಾ ಮತ್ತು ಜಾರ್ಜಿಯಾವನ್ನು ಟ್ರಂಪ್ ಗೆದ್ದಿದ್ದಾರೆ. ಅರಿಜೋನಾ, ಮಿಚಿಗನ್, ಪೆನ್ಸಿಲ್ವೇನಿಯಾ, ವಿಸ್ಕಾನ್ಸಿನ್ ಮತ್ತು ನೆವಾಡಾದಲ್ಲಿಯೂ ಮುಂದಿದ್ದಾರೆ.

ಡೊನಾಲ್ಡ್ ಟ್ರಂಪ್ 63,873,712 (51.1%) ಮತಗಳೊಂದಿಗೆ 230 ಸ್ಥಾನಗಳಲ್ಲಿ ಮುಂದಿದ್ದಾರೆ. ಕಮಲಾ ಹ್ಯಾರಿಸ್ 59,292,585 (47.5%) ಮತಗಳೊಂದಿಗೆ 210 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ತವರಿನಲ್ಲಿ ಟ್ರಂಪ್‌ಗೆ ಮುಖಭಂಗ
ನ್ಯೂಯಾರ್ಕ್‌ನಲ್ಲಿ ಕಮಲಾ ಹ್ಯಾರಿಸ್ ರಾಜ್ಯದ 28 ಚುನಾವಣಾ ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. ನ್ಯೂಯಾರ್ಕ್ 1984ರ ಚುನಾವಣೆಯಲ್ಲಿ ರೊನಾಲ್ಡ್ ರೇಗನ್ ಅವರಿಗೆ ಅನುಮೋದನೆ ನೀಡಿತ್ತು. ನಂತರದ ಪ್ರತಿ ಅಧ್ಯಕ್ಷೀಯ ಸ್ಪರ್ಧೆಯಲ್ಲಿ ಡೆಮಾಕ್ರಟಿಕ್‌ಗೆ ಮತ ನೀಡಿದೆ. ನ್ಯೂಯಾರ್ಕ್ ಡೊನಾಲ್ಡ್ ಟ್ರಂಪ್ ಅವರ ತವರು ರಾಜ್ಯ. ತವರಲ್ಲಿ ಗೆಲುವು ಸಾಧಿಸಲು ಸತತವಾಗಿ ಹೆಣಗಾಡುತ್ತಿದ್ದಾರೆ. ಈವರೆಗೆ ಸ್ಪರ್ಧಿಸಿದ ಮೂರು ಚುನಾವಣೆಯಲ್ಲೂ ನ್ಯೂಯಾರ್ಕ್​ನಲ್ಲಿ ಸೋಲು ಅನುಭವಿಸಿದ್ದಾರೆ.

ವಾಷಿಂಗ್ಟನ್, ಕ್ಯಾಲಿಫೋರ್ನಿಯಾ, ನ್ಯೂ ಮೆಕ್ಸಿಕೋ, ಒರೆಗಾನ್, ವರ್ಜೀನಿಯಾದಲ್ಲಿ ಕಮಲಾ ಹ್ಯಾರಿಸ್ ಜಯಗಳಿಸಿದ್ದಾರೆ. ನಾರ್ಥ್‌ ಕೆರೊಲಿನಾ, ಮೊಂಟಾನಾ, ಕಾನ್ಸಾಸ್‌ನಲ್ಲಿ ಟ್ರಂಪ್ ಗೆದ್ದಿದ್ದಾರೆ.