ಅಮೆರಿಕದಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡೋದು 7 ರಾಜ್ಯದ ಜನತೆ! – ಏನಿದು Swing States? ಯಾಕೆ ಇಷ್ಟೊಂದು ಮಹತ್ವ?

ವಾಷಿಂಗ್ಟನ್‌: ಅಮೆರಿಕ ಚುನಾವಣೆಗೆ ಇನ್ನು ಎರಡು ದಿನ ಬಾಕಿಯಿದೆ. ಚುನಾವಣಾ ದಿನಾಂಕ ಹತ್ತಿರ ಬರುತ್ತಿದ್ದಂತೆ ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ (Donald Trump) ಮತ್ತು ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್‌ (Kamala Harris) ಮಧ್ಯೆ ನೇರಾನೇರ ಸ್ಪರ್ಧೆಯಿದೆ. ನೇರಾನೇರ ಸ್ಪರ್ಧೆಯಿದ್ದರೂ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು 7 ರಾಜ್ಯದ ಜನತೆ.

ಹೌದು. ಅಮೆರಿಕದಲ್ಲಿ ನೇರವಾಗಿ ಅಧ್ಯಕ್ಷ ಅಭ್ಯರ್ಥಿಗಳಿಗೆ ಜನರು ಮತವನ್ನು ಹಾಕುವುದಿಲ್ಲ. ಅದರ ಬದಲು ʼಎಲೆಕ್ಟರ್ಸ್‌ʼಗೆ ಮತವನ್ನು ಹಾಕುತ್ತಾರೆ. ಜನಸಂಖ್ಯೆಯ ಆಧಾರದಲ್ಲಿ ಪ್ರತಿಯೊಂದು ರಾಜ್ಯವು ಸಂಸತ್ತಿನಲ್ಲಿ ಹೊಂದಿರುವ ಸ್ಥಾನಗಳನ್ನು ವಿಂಗಡಿಸಲಾಗಿದೆ.

 

55 ಎಲೆಕ್ಟೋರಲ್​ ವೋಟ್​ಗಳೊಂದಿಗೆ ಕ್ಯಾಲಿಫೋರ್ನಿಯಾ ಮೊದಲ ಸ್ಥಾನದಲ್ಲಿದ್ದರೆ 38 ವೋಟ್​ಗಳೊಂದಿಗೆ ಟೆಕ್ಸಾಸ್​, ನ್ಯೂಯಾರ್ಕ್​​ ಮತ್ತು ಫ್ಲೋರಿಡಾ ತಲಾ 29, ಇಲಿನಾಯ್ಸ್​ ಮತ್ತು ಪೆನ್ಸಿಲ್ವೇನಿಯಾ ತಲಾ 19, ಓಹಿಯೊ 18, ಜಾರ್ಜಿಯಾ ಮತ್ತು ಮಿಷಿಗನ್ ತಲಾ 16 ಹಾಗೂ ನಾರ್ತ್ ಕರೊಲಿನಾ 15 ಎಲೆಕ್ಟೋರಲ್​ ಮತಗಳನ್ನು ಹೊಂದಿವೆ.

ಅಮೆರಿಕದಲ್ಲಿ ಒಟ್ಟು 538 ಎಲೆಕ್ಟೋರಲ್​ ಮತಗಳು ಇದೆ. ಈ ಪೈಕಿ 270 ಮತ ಪಡೆದವರು ವಿಜಯಿ ಎಂದು ಘೋಷಿಸಲಾಗುತ್ತದೆ. ಈ ಮತದಾರರು ನಂತರ ಅಧ್ಯಕ್ಷೀಯ ಅಭ್ಯರ್ಥಿಗಳಿಗೆ ನೇರ ಮತಗಳನ್ನು ಹಾಕುತ್ತಾರೆ. ಅದನ್ನು ಚುನಾವಣಾ ಮತಗಳು ಎಂದು ಕರೆಯಲಾಗುತ್ತದೆ.

ಮೊದಲೇ ಹೇಳಿದಂತೆ 7 ರಾಜ್ಯದ ಜನತೆ ಯಾವ ಪಕ್ಷಕ್ಕೆ ಹೆಚ್ಚು ಮತಗಳನ್ನು ಹಾಕುತ್ತಾರೋ ಅವರು ಆಯ್ಕೆ ಆಗುತ್ತಾರೆ. ಆದರೆ ಜನತೆ ಮತ ಮಾಡುವಾಗ ಅಭ್ಯರ್ಥಿ ಮತ್ತು ಪಕ್ಷವನ್ನು ನೋಡಿಕೊಂಡೇ ಮತವನ್ನು ಹಾಕುತ್ತಾರೆ. ಹೀಗಾಗಿ ಎಲೆಕ್ಟರ್ಸ್‌ಗೆ ಮತ ಹಾಕಿದರೂ ಅದು ಅಧ್ಯಕ್ಷನಿಗೆ ಬಿದ್ದ ಮತ ಎಂದೇ ಪರಿಗಣಿಸಲಾಗುತ್ತದೆ.

ನಿರ್ಣಾಯಕ ರಾಜ್ಯಗಳು:
ಅಮೆರಿಕ ಚುನಾವಣೆ ನಾರ್ಥ್‌ ಕೆರೊಲಿನಾ, ಅರಿಜೋನಾ, ಜಾರ್ಜಿಯಾ, ನೆವಾಡಾ, ಮಿಷಿಗನ್, ಪೆನ್ಸಿಲ್ವೇನಿಯಾ ಮತ್ತು ವಿಸ್ಕಾನ್ಸಿನ್ ನಿರ್ಣಾಯಕ ರಾಜ್ಯಗಳಾಗಿವೆ. ಈ ರಾಜ್ಯಗಳನ್ನು ಯಾರು ಗೆಲ್ಲುತ್ತಾರೋ ಅವರು ಅಧ್ಯಕ್ಷ ಸ್ಥಾನ ಅಲಂಕರಿಸುತ್ತಾರೆ.

ಈ ರಾಜ್ಯದ ಜನತೆ ಒಂದು ಬಾರಿ ರಿಪಬ್ಲಿಕನ್‌ ಅಭ್ಯರ್ಥಿಗೆ ಮತ ಹಾಕಿದರೆ ಇನ್ನೊಂದು ಬಾರಿ ಡೆಮಾಕ್ರಟಿಕ್ ಪಕ್ಷವನ್ನು ಬೆಂಬಲಿಸುತ್ತಾರೆ. ಹೀಗಾಗಿ ಅಧಿಕೃತವಾಗಿ ಒಂದೇ ಪಕ್ಷವನ್ನು ಬೆಂಬಲಿಸುತ್ತಾರೆ ಎನ್ನುವುದಕ್ಕೆ ಗ್ಯಾರಂಟಿ ಇಲ್ಲ. ಈ ಕಾರಣಕ್ಕೆ ಚುನಾವಣಾ ಫಲಿತಾಂಶವನ್ನೇ ಬದಲಿಸಬಲ್ಲ ಈ ರಾಜ್ಯಗಳನ್ನು ʼSwing States’ ಎಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲದೇ ಈ ರಾಜ್ಯಗಳಲ್ಲಿ ಅಭ್ಯರ್ಥಿಗಳ ಗೆಲುವಿನ ಅಂತರ ಬಹಳ ಕಡಿಮೆ ಇರುತ್ತದೆ.

 

ಮುನ್ನಡೆಯಲ್ಲಿ ಟ್ರಂಪ್‌:
2016ರಲ್ಲಿ ಹಿಲರಿ ಕ್ಲಿಂಟನ್‌ ಅವರನ್ನು ಸೋಲಿಸಿ ಟ್ರಂಪ್‌ ಅಧಿಕಾರಕ್ಕೆ ಏರಲು ಮತ್ತು 2020ರಲ್ಲಿ ಟ್ರಂಪ್‌ ಅವರನ್ನು ಸೋಲಿಸಿ ಜೋ ಬೈಡೆನ್‌ ಅವರು ಅಧ್ಯಕ್ಷ ಸ್ಥಾನಕ್ಕೆ ಏರಲು ಈ ರಾಜ್ಯಗಳೇ ನಿರ್ಣಾಯವಾಗಿದ್ದವು. ಹೀಗಾಗಿ ಈ 7 ರಾಜ್ಯಗಳಲ್ಲಿ ಡೊನಾಲ್ಡ್‌ ಟ್ರಂಪ್‌ ಮತ್ತು ಕಮಲಾ ಹ್ಯಾರಿಸ್‌ ಭರ್ಜರಿ ಪ್ರಚಾರವನ್ನು ಕೈಗೊಂಡಿದ್ದಾರೆ. ಆದರೆ ಸದ್ಯ ಈ ರಾಜ್ಯಗಳಲ್ಲಿ ಡೊನಾಲ್ಡ್‌ ಟ್ರಂಪ್‌ ಮುನ್ನಡೆಯಲ್ಲಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ.

ಯಾವ ರಾಜ್ಯದಲ್ಲಿ ಎಷ್ಟು ವೋಟ್‌?
ನಾರ್ಥ್‌ ಕೆರೊಲಿನಾ (16 ಎಲೆಕ್ಟ್ರೋರಲ್‌ ವೋಟ್ಸ್‌)
2016 – ಟ್ರಂಪ್‌ಗೆ ಜಯ (ಟ್ರಂಪ್‌ 50.5%, ಕ್ಲಿಂಟನ್‌ 46.8%)
2020 – ಟ್ರಂಪ್‌ಗೆ ಜಯ (ಟ್ರಂಪ್‌ 50.1%, ಕ್ಲಿಂಟನ್‌ 48.7%)

ಅರಿಜೋನಾ (11 ಎಲೆಕ್ಟ್ರೋರಲ್‌ ವೋಟ್ಸ್‌)
2016 – ಟ್ರಂಪ್‌ಗೆ ಜಯ (ಟ್ರಂಪ್‌ 49%, ಕ್ಲಿಂಟನ್‌ 45.5%)
2020 – ಬೈಡನ್‌ಗೆ ಜಯ (ಬೈಡನ್‌ 49.4%, ಟ್ರಂಪ್‌ 49.1%)

ನೆವಾಡ (6 ಎಲೆಕ್ಟ್ರೋರಲ್‌ ವೋಟ್ಸ್‌)
2016 – ಕ್ಲಿಂಟನ್‌ಗೆ ಜಯ (ಕ್ಲಿಂಟನ್‌ 47.9%, ಟ್ರಂಪ್‌ 45.5%)
2020 – ಬೈಡನ್‌ಗೆ ಜಯ (ಬೈಡನ್‌ 50.1%, ಟ್ರಂಪ್‌ 47.7%)

ಜಾರ್ಜಿಯಾ (16 ಎಲೆಕ್ಟ್ರೋರಲ್‌ ವೋಟ್ಸ್‌)
2016 – ಟ್ರಂಪ್‌ಗೆ ಗೆಲುವು (ಟ್ರಂಪ್‌ 51%, ಕ್ಲಿಂಟನ್‌ 45.9%)
2020 – ಬೈಡನ್‌ಗೆ ಗೆಲುವು (ಬೈಡನ್‌ 49.5%, ಟ್ರಂಪ್‌ 49.3%)

ಮಿಷಿಗನ್ (15 ಎಲೆಕ್ಟ್ರೋರಲ್‌ ವೋಟ್ಸ್‌)
2016 – ಟ್ರಂಪ್‌ಗೆ ಗೆಲುವು (ಟ್ರಂಪ್‌ 47.6%, ಕ್ಲಿಂಟನ್‌ 47.4%)
2020- ಬೈಡನ್‌ಗೆ ಗೆಲುವು (ಬೈಡನ್‌ 50.6%, ಟ್ರಂಪ್‌ 47.8%

ವಿಸ್ಕಾನ್ಸಿನ್(10 ಎಲೆಕ್ಟ್ರೋರಲ್‌ ವೋಟ್ಸ್‌)
2016 – ಟ್ರಂಪ್‌ಗೆ ಗೆಲುವು (ಟ್ರಂಪ್‌ 47.8%, ಕ್ಲಿಂಟನ್‌ 47%)
2020 – ಬೈಡನ್‌ಗೆ ಗೆಲುವು (ಬೈಡಬ್‌ 49.6%, ಟ್ರಂಪ್‌ 48.9%)

 

ಪೆನ್ಸಿಲ್ವೇನಿಯಾ (19 ಎಲೆಕ್ಟ್ರೋರಲ್‌ ವೋಟ್ಸ್‌)
2016 – ಟ್ರಂಪ್‌ಗೆ ಜಯ ( ಟ್ರಂಪ್‌ 48.6%, ಕ್ಲಿಂಟನ್‌ 47.9%)
2020 – ಬೈಡನ್‌ಗೆ ಜಯ (ಬೈಡನ್‌ 50%, ಟ್ರಂಪ್‌ 48.8%)