ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಬಾಂಬ್‌ ದಾಳಿ

– ಪ್ರತಿ ದಾಳಿಗೆ ಇರಾನ್‌‌ ಪ್ಲ್ಯಾನ್‌

ವಾಷಿಂಗ್ಟನ್‌/ಟೆಹ್ರಾನ್‌: ಇರಾನ್‌ನ ಮೂರು ಪರಮಾಣು ಕೇಂದ್ರಗಳ (Nuclear Sites) ಮೇಲೆ ಅಮೆರಿಕ ಯಶಸ್ವಿ ದಾಳಿ ನಡೆಸಿರುವುದಾಗಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಘೋಷಣೆ ಮಾಡಿದ್ದಾರೆ. ಅಲ್ಲದೇ ನಮ್ಮ ಹಲವು ಗುರಿಗಳು ಇನ್ನೂ ಉಳಿದಿವೆ. ಶಾಂತಿ ಸಾಧಿಸದಿದ್ದರೆ ಮತ್ತೆ ದಾಳಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇರಾನ್‌ನ ಫೋರ್ಡೊ, ನತಾನ್ಸ್ ಮತ್ತು ಎಸ್ಪಹಾನ್‌ ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸಲಾಗಿದೆ. ಎಲ್ಲ ವಿಮಾನಗಳು ಇರಾನ್ ವಾಯುಪ್ರದೇಶದಿಂದ ಸುರಕ್ಷಿತವಾಗಿ ಹೊರಗೆ ಬಂದಿವೆ. ಪ್ರಾಥಮಿಕ ಅಣು ಕೇಂದ್ರವಾದ ಫೋರ್ಡೊ ಮೇಲೆ ಪೂರ್ಣ ಪ್ರಮಾಣದ ಪೇಲೋಡ್ ಹೊಂದಿದ ಬಾಂಬ್ ದಾಳಿ ನಡೆಸಲಾಯಿತು ಎಂದು ಶ್ವೇತಭವನದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: 21 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್‌ ಬಲೂನ್‌ನಲ್ಲಿ ಬೆಂಕಿ ಅವಘಡ; 8 ಮಂದಿ ದುರ್ಮರಣ

ಈ ಕುರಿತು ಟ್ರಂಪ್‌ ಸೋಷಿಯಲ್‌ ಮೀಡಿಯಾ ‘ಟ್ರತ್’ ನಲ್ಲಿ ಮಾಹಿತಿ ನೀಡಿದ್ದು, ಅಮೆರಿಕ ನಡೆಸಿರುವ ಕಾರ್ಯಾಚರಣೆಯ ಸಂಬಂಧ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವುದಾಗಿ ತಿಳಿಸಿದ್ದಾರೆ.

ದಾಳಿ ನಡೆಸಿದ ಎಲ್ಲ ಯುದ್ಧ ವಿಮಾನಗಳು ಸುರಕ್ಷಿತವಾಗಿ ಹಿಂತಿರುಗುಗಿವೆ. ಕಾರ್ಯವನ್ನು ಯಶಸ್ವಿಗೊಳಿಸಿದ ಅಮೆರಿಕದ ಮಹಾನ್ ಯೋಧರಿಗೆ ಅಭಿನಂದನೆಗಳು. ಜಗತ್ತಿನ ಬೇರೆ ಯಾವುದೇ ಸೈನ್ಯಕ್ಕೆ ಇಂತಹ ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲ. ಈಗ ಶಾಂತಿಯ ಸಮಯ ಎಂದು ಟ್ರಂಪ್‌ ಹೇಳಿದ್ದಾರೆ. ಇದನ್ನೂ ಓದಿ: ಬಂಕರ್‌ನಿಂದಲೇ ಸಂಭಾವ್ಯ ಉತ್ತರಾಧಿಕಾರಿಗಳ ಹೆಸರನ್ನು ಸೂಚಿಸಿದ ಖಮೇನಿ

ಅಮೆರಿಕ ವಾಯು ದಾಳಿಯ ನಂತರ ಇರಾನ್‌ ಕೂಡ ಎಚ್ಚರಿಕೆ ನೀಡಿದೆ. ಅಮೆರಿಕದ ನಾಗರಿಕರು ಹಾಗೂ ಮಿಲಿಟರಿ ಸಿಬ್ಬಂದಿಯನ್ನ ಗುರಿಯಾಗಿಸಿ ದಾಳಿ ನಡೆಸುವ ದೊಡ್ಡ ಎಚ್ಚರಿಕೆ ನೀಡಿದೆ.