ಅಮೆರಿಕದಿಂದ ಏರ್ ಸ್ಟ್ರೈಕ್ – ಇರಾನ್ ಸೇನಾಧಿಕಾರಿ ಹತ್ಯೆ, ಕಚ್ಚಾ ತೈಲ ಬೆಲೆ ಏರಿಕೆ

ಬಾಗ್ದಾದ್: ಇರಾನ್ ಮೇಲೆ ಅಮೆರಿಕ ಶುಕ್ರವಾರ ದಾಳಿ ನಡೆಸಿ ಇರಾನಿನ ಉನ್ನತ ಸೇನಾಧಿಕಾರಿ ಮತ್ತು ಮಿಲಿಟರಿ ಪಡೆಯ ಉಪ ಮುಖ್ಯಸ್ಥನನ್ನು ಹತ್ಯೆ ಮಾಡಿದೆ.

ಇಂದು ನಸುಕಿನ ಜಾವ ಅಮೆರಿಕ ಸೇನೆ ಡ್ರೋನ್ ದಾಳಿ ನಡೆಸಿ ಬಾಗ್ದಾದ್ ವಿಮಾನ ನಿಲ್ದಾಣ ರಸ್ತೆಯಲ್ಲಿ ಇರಾನಿನ ಉನ್ನತ ಸೇನಾಧಿಕಾರಿ ಜನರಲ್ ಕಸ್ಸೆಮ್ ಸುಲೈಮಾನಿ ಮತ್ತು ಮಿಲಿಟರಿ ಪಡೆಯ ಉಪ ಮುಖ್ಯಸ್ಥ ಅಬು ಮಹ್ದಿ ಅಲ್-ಮುಹಂಡೇಸ್ ರನ್ನು ಕೊಂದು ಹಾಕಿದೆ.

ಇರಾನಿನ ಉನ್ನತ ಸೇನಾಧಿಕಾರಿ ಮತ್ತು ಇರಾನ್ ಮಿಲಿಟರಿ ಪಡೆಯ ಉಪ ಮುಖ್ಯಸ್ಥನನ್ನು ಹತ್ಯೆ ಮಾಡಿದ ನಂತರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ರಾಷ್ಟ್ರಧ್ವಜ ಫೋಟೋವನ್ನು ಅಪ್ಲೋಡ್ ಮಾಡಿ ಟ್ವೀಟ್ ಮಾಡಿದ್ದಾರೆ.

ದಾಳಿ ನಡೆಸಿದ್ದು ಯಾಕೆ?
ಅಮೆರಿಕ ಸೇನೆ ನಡೆಸಿದ್ದ ವಾಯುದಾಳಿಯಲ್ಲಿ ಇರಾನ್ ಸೇನೆಯಿಂದ ತರಬೇತಿ ಪಡೆದಿದ್ದ ಪಾಪ್ಯುಲರ್ ಮೊಬಿಲೈಜೇಷನ್ ಫೋರ್ಸಸ್ (ಪಿಎಂಎಫ್) 25 ಮಂದಿ ಹತ್ಯೆಯಾಗಿದ್ದರು. ಈ ಕಾರಣಕ್ಕೆ ಮಂಗಳವಾರ ಬಾಗ್ದಾದ್‍ನಲ್ಲಿ ಅಮೆರಿಕ ರಾಯಭಾರ ಕಚೇರಿಯ ಮೇಲೆ ದಾಳಿ ನಡೆದು ಧ್ವಂಸಗೊಳಿಸುವ ಪ್ರಯತ್ನ ನಡೆದಿತ್ತು. ಈ ದಾಳಿಯನ್ನು ಅಮೆರಿಕ ಖಂಡಿಸಿತ್ತು. ಅಲ್ಲದೇ ಇದಕ್ಕೆ ಪ್ರತೀಕಾರ ತೀರಿಸುವುದಾಗಿ ಹೇಳಿತ್ತು.

ಈ ಸಂಬಂಧ ಟ್ವಿಟ್ಟರಿನಲ್ಲಿ ಶ್ವೇತಭವನ ಪ್ರತಿಕ್ರಿಯಿಸಿ, ಜನರಲ್ ಕಸ್ಸೆಮ್ ಸುಲೈಮಾನಿ ಅಮೆರಿಕದ ರಾಯಭಾರ ಕಚೇರಿಯ ಅಧಿಕಾರಿಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಹಿನ್ನೆಲೆಯಲ್ಲಿ ವಿದೇಶದಲ್ಲಿರುವ ಅಮೆರಿಕ ಪ್ರಜೆಗಳ ರಕ್ಷಣೆಗಾಗಿ ಡೊನಾಲ್ಡ್ ಟ್ರಂಪ್ ಅವರ ಆದೇಶದ ಅನ್ವಯ ಈ ದಾಳಿ ನಡೆಸಲಾಗಿದೆ ಎಂದು ಟ್ವೀಟ್ ಮಾಡಿದೆ.

ದಾಳಿಯನ್ನು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಖಂಡಿಸಿದ್ದು, ದೇಶಕ್ಕಾಗಿ ಕಸ್ಸೆಮ್ ಸುಲೈಮಾನಿ ಪ್ರಾಣವನ್ನು ತೆತ್ತಿದ್ದಾರೆ. ಈ ತ್ಯಾಗವನ್ನು ನಾವು ಮರೆಯುವುದಿಲ್ಲ. ಶೀಘ್ರವೇ ಪ್ರತೀಕಾರವನ್ನು ತೀರಿಸಲಾಗುವುದು ಎಂದು ಹೇಳಿದ್ದಾರೆ. ಹಸನ್ ರೂಹಾನಿಯ ನಂತರ ಇರಾನಿನ ನಂಬರ್ 2 ವ್ಯಕ್ತಿ ಜನರಲ್ ಕಸ್ಸೆಮ್ ಸುಲೈಮಾನಿ ಆಗಿದ್ದರು.

ತೈಲ ಬೆಲೆ ಏರಿಕೆ:
ಇರಾನ್ ಮೇಲೆ ಅಮೆರಿಕ ದಾಳಿ ನಡೆಸಿದ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ದಿಢೀರ್ ಏರಿಕೆಯಾಗಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.4.39 ರಷ್ಟು ಏರಿಕೆಯಾಗಿದ್ದು ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 69.16 ಡಾಲರ್(ಅಂದಾಜು 4,900 ರೂ.) ತಲುಪಿದೆ. ಈ ಹಿಂದೆ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 66.25 ಡಾಲರ್(ಅಂದಾಜು 4,700 ರೂ.) ಇತ್ತು.

Comments

Leave a Reply

Your email address will not be published. Required fields are marked *