ಕಳೆದ ಮೂರ್ನಾಲ್ಕು ದಿನಗಳಿಂದ ಸ್ಯಾಂಡಲ್ ವುಡ್ ನಲ್ಲಿ ‘ಉರಿಗೌಡ (Urigowda)-ನಂಜೇಗೌಡ (Nanjegowda)’ ಚಿತ್ರದ್ದೇ ಸುದ್ದಿ. ತೋಟಗಾರಿಕಾ ಸಚಿವ ಹಾಗೂ ನಿರ್ಮಾಪಕ ಮುನಿರತ್ನ (Munirathna) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸುತ್ತಿದ್ದಂತೆಯೇ ಈ ಸಿನಿಮಾ ಆಗತ್ತಾ? ಅಥವಾ ಪ್ರಚಾರಕ್ಕಾಗಿ ಮಾಡಿದ ಗಿಮಿಕ್ಕಾ ಎನ್ನುವ ಚರ್ಚೆ ಶುರುವಾಗಿತ್ತು. ನಿರ್ಮಾಪಕರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಮುಹೂರ್ತದ ದಿನಾಂಕವನ್ನೂ ಘೋಷಣೆ ಮಾಡಿದ್ದಾರೆ.
ಮುನಿರತ್ನ ಅವರ ನಿರ್ಮಾಣ ಸಂಸ್ಥೆಯ ಟ್ವೀಟರ್ ಖಾತೆಯಿಂದ ಮೇ 18ರಂದು ಉರಿಗೌಡ ನಂಜೇಗೌಡ ಚಿತ್ರಕ್ಕೆ ಮುಹೂರ್ತ ಎಂದು ಬರೆಯುತ್ತಿದ್ದಂತೆಯೇ ಚರ್ಚೆಯ ಕಾವು ಜೋರಾಗಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆದಿಯಾಗಿ ಅನೇಕರು ಈ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದಾರೆ. ಒಕ್ಕಲಿಗರ ಸಂಘಗಳು ವಿರೋಧಿಸಿವೆ. ಭಾರೀ ವಿರೋಧ ಬಂದ ಹಿನ್ನೆಲೆಯಲ್ಲಿ ಇಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ (Nirmalanandanath Swamiji) ಅವರನ್ನು ಮುನಿರತ್ನ ಭೇಟಿಯಾಗುತ್ತಿದ್ದಾರೆ. ಇದನ್ನೂ ಓದಿ: ವಿವಾದದ ನಡುವೆಯೂ `ಉರಿಗೌಡ – ನಂಜೇಗೌಡ’ ಚಿತ್ರೀಕರಣಕ್ಕೆ ಮುಹೂರ್ತ ಫಿಕ್ಸ್!
ಇಂದು ನಿರ್ಮಲಾನಂದನಾಥ ಸ್ವಾಮಿಗಳನ್ನು ಮುನಿರತ್ನ ಭೇಟಿಯಾಗಿ ಚಿತ್ರದ ಕುರಿತು ಸಲಹೆಗಳನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಆಗತ್ತಾ ಅಥವಾ ನಿಲ್ಲುತ್ತಾ ಎನ್ನುವುದು ಈ ಭೇಟಿಯ ನಂತರ ಸ್ಪಷ್ಟತೆ ಸಿಗಲಿದೆ. ಈ ಸಿನಿಮಾಗೆ ಸ್ವಾಮಿಗಳ ಬೆಂಬಲ ಇರುತ್ತಾ ಅಥವಾ ಸಿನಿಮಾ ಮಾಡುವುದನ್ನು ನಿಲ್ಲಿಸಿ ಎಂದು ಸಲಹೆ ನೀಡುತ್ತಾರಾ ಎನ್ನುವುದೇ ಸದ್ಯಕ್ಕಿರುವ ಕುತೂಹಲ.
ಈ ಚಿತ್ರಕ್ಕೆ ಸಚಿವ ಸಿ.ಎನ್. ಅಶ್ವತ್ಥ್ ನಾರಾಯಣ್ (Ashwattha Narayan) ಚಿತ್ರಕಥೆ ಬರೆಯಲಿದ್ದಾರೆ ಎಂದು ಮುನಿರತ್ನ ಹೇಳಿದ್ದರು. ಆದರೆ, ಈ ಮಾತನ್ನು ಅಶ್ವತ್ಥ್ ನಾರಾಯಣ್ ಅಲ್ಲಗಳೆದಿದ್ದಾರೆ. ಆದರೂ, ಪೋಸ್ಟರ್ ನಲ್ಲಿ ಅಶ್ವತ್ಥ್ ನಾರಾಯಣ ಹೆಸರು ಹಾಗೆಯೇ ಇದೆ. ಈ ಸಿನಿಮಾವನ್ನು ಆರ್.ಎಸ್. ಗೌಡ ನಿರ್ದೇಶನ ಮಾಡಲಿದ್ದಾರೆ.




Leave a Reply