ನಿರೀಕ್ಷಿತ ಅಂಕ ಬರದ್ದಕ್ಕೆ ಮನನೊಂದು ವಿದ್ಯಾರ್ಥಿಗಳಿಬ್ಬರು ನೇಣಿಗೆ ಶರಣು!

ನವದೆಹಲಿ: ಮಂಗಳವಾರ ಸಿಬಿಎಸ್‍ಇ 10ನೇ ತರಗತಿಯ ಫಲಿತಾಂಶ ಪ್ರಕಟಗೊಂಡಿದ್ದು, ನಿರೀಕ್ಷಿತ ಅಂಕಗಳು ಬಾರದಿದ್ದಕ್ಕೆ ಇಬ್ಬರು ವಿದ್ಯಾರ್ಥಿಗಳು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯ ಕಾರ್ಕೋಳ ಮತ್ತು ವಸಂತ್ ಕುಂಜ್ ಎಂಬಲ್ಲಿ ನಡೆದಿದೆ.

ರೋಹಿತ್ ಕುಮಾರ್ ಮೀನ ಮತ್ತು ಪ್ರಗ್ಯಾ ಪಾಂಡೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳು. ರೋಹಿತ್ ದ್ವಾರಕ್ ನಗರದ ಎಂ.ಆರ್ ವಿವೇಕಾನಂದ ಮಾಡೆಲ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕ ಬಾರದ ಹಿನ್ನೆಲೆಯಲ್ಲ ಮಧ್ಯಾಹ್ನ ಸುಮಾರು 3.45ಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಪೋಷಕರು ರೋಹಿತ್‍ನನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದ್ದರಾದ್ರೂ ಮಾರ್ಗಮಧ್ಯೆ ಆತ ಸಾವನ್ನಪ್ಪಿದ್ದಾನೆ.

ಇತ್ತ ಪ್ರಗ್ಯಾ ಪಾಂಡೆ ವಿದ್ಯಾರ್ಥಿನಿಯು ನೈಋತ್ಯ ದೆಹಲಿಯ ರೆಯಾನ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಫಲಿತಾಂಶ ಶೇ 70 ರಷ್ಟು ಬಂದಿದ್ದರೂ, ತಾನು ನಿರೀಕ್ಷಿಸಿದಷ್ಟು ಅಂಕ ಬರಲಿಲ್ಲವೆಂದು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರೀಕ್ಷೆಯಲ್ಲಿ ಉತ್ತಮ ಅಂಕ ಬಾರದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ ಅಂತಾ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *