ಉಗ್ರ ಸಂಘಟನೆ ಸೇರಿಕೊಂಡ ಯುಪಿ ವಿದ್ಯಾರ್ಥಿ!

ಲಕ್ನೋ: ನಾಪತ್ತೆಯಾಗಿದ್ದ ಉತ್ತರ ಪ್ರದೇಶದ ಖಾಸಗಿ ವಿಶ್ವವಿದ್ಯಾಲಯದ ಕಾಶ್ಮೀರಿ ವಿದ್ಯಾರ್ಥಿ ಉಗ್ರ ಸಂಘಟನೆ ಸೇರಿಕೊಂಡಿದ್ದಾನೆ ಎನ್ನಲಾಗಿದ್ದು, ಆತನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಗ್ರೇಟರ್ ನೋಯ್ಡಾ ಶಾರ್ಡಾ ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷ ಓದುತ್ತಿದ್ದ ಶ್ರೀನಗರ ಮೂಲದ ಅಹ್ತೇಶಮ್ ಬಿಲಾಲ್ ಸೋಫಿ ಉಗ್ರ ಸಂಘಟನೆಗೆ ಸೇರಿದ್ದಾನೆ. ಅಹ್ತೇಶಮ್ ದೆಹಲಿಗೆ ಹೋಗುವುದಾಗಿ ಹೇಳಿ ಅಕ್ಟೋಬರ್ 28ರಂದು ನಾಪತ್ತೆಯಾಗಿದ್ದ. ಅವನು ವಿಶ್ವವಿದ್ಯಾಲಯ ಬಿಟ್ಟು ಹೋದ ನಂತರದ ದಿನ ಕ್ಯಾಂಪಸ್‍ನಲ್ಲಿ ಭಾರತೀಯ ಹಾಗೂ ಅಫ್ಘಾನ್ ವಿದ್ಯಾರ್ಥಿಗಳು ಜಗಳವಾಡಿದ್ದರು ಎಂದು ವರದಿಯಾಗಿದೆ.

ಅಹ್ತೇಶಮ್ ನಾಪತ್ತೆಯಾದ ಕುರಿತು ಗ್ರೇಟರ್ ನೋಯ್ಡಾ ಹಾಗೂ ಶ್ರೀನಗರದ ಖನ್ಯಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಐಎಸ್‍ಜೆಕೆ ಉಗ್ರ ಸಂಘಟನೆಯ ಉಡುಪು ಧರಿಸಿದ ಅಹ್ತೇಶಮ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐಎಸ್‍ಜೆಕೆ ಸಂಘಟನೆ ಐಸಿಸ್ ಸಿದ್ಧಾಂತಗಳನ್ನು ಅಳವಡಿಸಿಕೊಂಡಿದ್ದು, ಅದರ ಪ್ರೇರಣೆಯಲ್ಲಿ ಕೆಲಸ ಮಾಡುತ್ತಿದೆ.

ಗ್ರೇಟರ್ ನೋಯ್ಡಾದಿಂದ ಕಾಶ್ಮೀರದವರೆಗೆ ವಿದ್ಯಾರ್ಥಿ ಬಂದಿರುವುದನ್ನು ಟ್ರಾಕ್ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಸಂಪರ್ಕ ಸಾಧಿಸಿಕೊಂಡು ವಿದ್ಯಾರ್ಥಿಯ ಪತ್ತೆಗೆ ಕಾರ್ಯಾಚರಣೆ ನಡೆದಿದೆ ಎಂದು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿ ಮೂಲಗಳು ತಿಳಿಸಿವೆ.

ಜಮ್ಮು ಮತ್ತು ಕಾಶ್ಮೀರ ಪರ್ವತ ಶ್ರೇಣಿಯಲ್ಲಿ ಉಗ್ರ ಸಂಘಟನೆ ನೆಲೆ ಕಂಡುಕೊಂಡಿದೆ. ಅವರೊಂದಿಗೆ ಅಹ್ತೇಶಮ್ ಕೂಡ ಇದ್ದಾನೆ ಎನ್ನಲಾಗಿದೆ. ಜೊತೆಗೆ ಅಹ್ತೇಶಮ್ ಮೊಬೈಲ್ ಟ್ರ್ಯಾಕ್ ಮಾಡಿರುವ ಗೌತಮ ಬುದ್ಧನಗರ ಪೊಲೀಸರು, ವಿದ್ಯಾರ್ಥಿ ಪುಲ್ವಾಮ ಜಿಲ್ಲೆಯ ದಕ್ಷಿಣ ಕಾಶ್ಮೀರ ಭಾಗದಲ್ಲಿ ಇದ್ದಾನೆ ಎಂದು ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಪುಲ್ವಾಮ ಸೇರಿದ್ದು ಹೇಗೆ?:
ಗ್ರೇಟರ್ ನೋಯ್ಡಾದಿಂದ ಅಕ್ಟೋಬರ್ 28ರಂದು ದೆಹಲಿಗೆ ಬಂದ ಅಹ್ತೇಶಮ್, ಅಲ್ಲಿಂದ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶ್ರೀನಗರಕ್ಕೆ ಬಂದು ಪುಲ್ವಾಮ ಸೇರಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ಅಂದು ಮಧ್ಯಾಹ್ನ 4.30ಕ್ಕೆ ತನ್ನ ತಂದೆಗೆ ಕರೆ ಮಾಡಿ ಮಾತನಾಡಿದ್ದಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *