ಯುಪಿಯ ಪುರುಷನಿಗೆ ಪಾಕ್ ಏಜೆಂಟ್ ನೇಹಾ ಆಮಿಷ – ರಕ್ಷಣಾ ಇಲಾಖೆಯ ಮಾಹಿತಿ ಸೋರಿಕೆ ಮಾಡ್ತಿದ್ದವನ ಬಂಧನ

ಲಕ್ನೋ: ಪಾಕಿಸ್ತಾನದ (Pakistan) ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್‌ (ISI) ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಫಿರೋಜಾಬಾದ್‌ನ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ಬಂಧಿಸಿದೆ.

ಬಂಧಿತನನ್ನ ರವೀಂದ್ರ ಕುಮಾರ್ ಎಂದು ಗುರುತಿಸಲಾಗಿದೆ. ‌ಫಿರೋಜಾಬಾದ್‌ನ ಹಜರತ್‌ಪುರ ಮೂಲದ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಈತ ಗಗನಯಾನ ಬಾಹ್ಯಾಕಾಶ ಯೋಜನೆ ಮತ್ತು ಮಿಲಿಟರಿ ಲ್ಯಾಜಿಸ್ಟಿಜ್ಸ್‌, ಡ್ರೋನ್ ಪ್ರಯೋಗಗಳ ಮಾಹಿತಿ ಸೇರಿದಂತೆ ಗೌಪ್ತ ಮಾಹಿತಿಯನ್ನ ಪಾಕಿಸ್ತಾನದ ಐಎಸ್‌ಐ ಜೊತೆಗೆ ಹಂಚಿಕೊಂಡಿದ್ದಾನೆ ಎಂದು ಯುಪಿ ಎಟಿಎಸ್ (UP ATS) ಮುಖ್ಯಸ್ಥ ನೀಲಬ್ಜಾ ಚೌಧರಿ ತಿಳಿಸಿದ್ದಾರೆ.

ರವೀಂದ್ರ ಕುಮಾರ್‌ನನ್ನ ತೀವ್ರ ವಿಚಾರಣೆಗೆ ಒಳಪಡಿಸಿದ ಬಳಿಕ ಆತ ʻನೇಹಾʼ (Neha) ಎಂಬ ಹ್ಯಾಂಡ್ಲರ್‌ ಮೂಲಕ ರಕ್ಷಣಾ ವಲಯದ ಸೂಕ್ಷ್ಮ ಮಾಹಿತಿಗಳನ್ನ ಹಂಚಿಕೊಂಡಿರುವುದು ತಿಳಿದುಬಂದಿದೆ. ಈ ಮಾಹಿತಿಯನ್ನ ಇತರ ಕಾನೂನು ಸಂಸ್ಥೆಗಳೊಂದಿಗೆ ಹಂಚಿಕೊಂಡಿರುವುದಾಗಿ ಚೌಧರಿ ವಿವರಿಸಿದ್ದಾರೆ.

ʻನೇಹಾʼ ಹೆಸರಿನ ಹ್ಯಾಂಡ್ಲರ್‌ ಕಳೆದ ಒಂದು ವರ್ಷದ ಹಿಂದೆ ಫೇಸ್‌ ಮೂಲಕ ರವೀಂದ್ರನನ್ನ ಸಂಪರ್ಕಿಸಿದ್ದಳು. ಈಕೆಯೊಂದಿಗೆ ರಸಹ್ಯ ಡೇಟಾ ಹಂಚಿಕೊಳ್ಳುತ್ತಿದ್ದ ರವೀಂದ್ರ ತನ್ನ ಕೋಡನ್ನು ಮರೆ ಮಾಚಲು ʻಚಂದನ್‌ ಸ್ಟೋರ್‌ ಕೀಪರ್‌-2ʼ ಎಂದು ಸೇವ್‌ ಮಾಡಿಕೊಂಡಿದ್ದ. ಹಣದ ಆಮಿಷಕ್ಕೆ ಒಳಗಾಗಿ‌ ವಾಟ್ಸಪ್‌ ಮೂಲಕವೂ ಅನೇಕ ಗೌಪ್ಯ ಮಾಹಿತಿಗಳನ್ನ ಹಂಚಿಕೊಂಡಿದ್ದ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಸಮಗ್ರ ಮಾಹಿತಿ ಕಲೆ ಹಾಕಿದ ಅಧಿಕಾರಿಗಳು ರವೀಂದ್ರನನ್ನ ಆಗ್ರಾದಲ್ಲಿ ಬಂಧಿಸಿದ್ದಾರೆ. ಇದೇ ವೇಳೆ ಆತನ ಸಹಚರನನ್ನೂ ಬಂಧಿಸಲಾಗಿದ್ದು, ವಾಟ್ಸಪ್ ಚಾಟ್‌, ವರ್ಗೀಕೃತ ದಾಖಲೆ ಸೇರಿದಂತೆ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಕೊಂಡಿದೆ. ಪ್ರಕರಣದ ತನಿಖೆ ಮುಂದುವರಿದಿದೆ.