ರಾಷ್ಟ್ರಗೀತೆಗೆ ಅಡ್ಡಿ- ಮದರಸದ ಮಾನ್ಯತೆ ರದ್ದುಗೊಳಿಸಿದ ಯೋಗಿ ಸರ್ಕಾರ!

ಲಕ್ನೋ: ಸ್ವಾತಂತ್ರ್ಯ ದಿನಾಚರಣೆಯ ವೇಳೆ ಮಕ್ಕಳು ರಾಷ್ಟ್ರಗೀತೆ ಹಾಡುತ್ತಿರುವಾಗ ಅಡ್ಡಿಪಡಿಸಿದ ಕ್ರಮಕ್ಕೆ ಮದರಸದ ಮಾನ್ಯತೆಯನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಆಗಸ್ಟ್ 15ರಂದು ಉತ್ತರಪ್ರದೇಶದ ಮಹಾರಾಜಗಂಜ್ ಜಿಲ್ಲೆಯ ಮದರಸದಲ್ಲಿ ಪ್ರಾಂಶುಪಾಲರು ಹಾಗೂ ಮುಸ್ಲಿಂ ಧರ್ಮಗುರು ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣದ ನಂತರ ಮಕ್ಕಳು ಹಾಡುತ್ತಿದ್ದ ರಾಷ್ಟ್ರಗೀತೆಯನ್ನು ತಡೆದು, ಇದು ಇಸ್ಲಾಂಗೆ ವಿರೋಧವೆಂದು ಅಡ್ಡಿಪಡಿಸಿದ್ದರು. ಈ ಸುದ್ದಿ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.

ಈ ಹಿನ್ನೆಲೆಯಲ್ಲಿ ಮದರಸದ ಕ್ರಮವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ ಕೂಡಲೇ ಮದರಸದ ಮಾನ್ಯತೆಯನ್ನು ರದ್ದುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದನ್ನೂ ಓದಿ: ಮಕ್ಕಳಿಗೆ ರಾಷ್ಟ್ರಗೀತೆ ಹಾಡದಂತೆ ತಡೆದಿದ್ದ ಧರ್ಮಗುರು ಬಂಧನ

ಈ ಕುರಿತು ಜಿಲ್ಲಾ ಅಲ್ಪಸಂಖ್ಯಾತರ ಅಧಿಕಾರಿಯಾದ ಪ್ರಭತ್ ಕುಮಾರ್ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ವೇಳೆ ಮಕ್ಕಳಿಂದ ರಾಷ್ಟ್ರಗೀತೆಯನ್ನು ತಡೆದಿದ್ದು, ತನಿಖೆಯಲ್ಲಿ ದೃಢಪಟ್ಟಿದೆ. ಹೀಗಾಗಿ ಮದರಸದ ಮಾನ್ಯತೆಯನ್ನು ರದ್ದುಗೊಳಿಸಿದ್ದೇವೆ. ಅಲ್ಲದೇ ಸರ್ಕಾರದಿಂದ ಮದರಸಕ್ಕೆ ನೀಡುತ್ತಿದ್ದ ಎಲ್ಲಾ ಹಣಕಾಸು ಹಾಗೂ ಇತರೆ ನೆರವುಗಳನ್ನು ತಕ್ಷಣದಿಂದ ನಿಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರಗೀತೆ ಹಾಡುವ ವೇಳೆ ಮದರಸಾದ ಪ್ರಾಂಶುಪಾಲ ಫೈಯಾಸ್ ರೆಹ್ಮಾನ್ ಹಾಗೂ ಧರ್ಮಗುರು ಜುನೈದ್ ಅನ್ಸಾರಿ ಅಡ್ಡಿಪಡಿಸಿದ್ದು ತನಿಖೆಯಲ್ಲಿ ದೃಢಪಟ್ಟಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *