ಯುಪಿಯಲ್ಲಿ ಯೋಗಿಯಿಂದ ಇತಿಹಾಸ ಸೃಷ್ಟಿ – ಬಿಜೆಪಿ ಗೆದ್ದಿದ್ದು ಹೇಗೆ?

ಲಕ್ನೋ: ರಾಜ್ಯ ಮತ್ತು ಕೇಂದ್ರದಲ್ಲಿ ಡಬಲ್‌ ಎಂಜಿನ್‌ ಸರ್ಕಾರ, ಯೋಗಿ ಆದಿತ್ಯನಾಥ್‌ ಅವರ ಅಭಿವೃದ್ಧಿ ಮಂತ್ರದಿಂದ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಏರಿದೆ. ಈ ಮೂಲಕ 37 ವರ್ಷದ ಬಳಿಕ ಸತತ ಎರಡು ಬಾರಿ ಆಯ್ಕೆಯಾದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಯೋಗಿ ಪಾತ್ರರಾಗಿದ್ದಾರೆ.

ಗೆದ್ದಿದ್ದು ಹೇಗೆ?
ಉತ್ತರ ಪ್ರದೇಶ ಅಂದ್ರೆ ಗುಂಡಾರಾಜ್ಯ ಎಂದೇ ಫೇಮಸ್‌ ಆಗಿತ್ತು. ಯೋಗಿ ಆದಿತ್ಯನಾಥ್‌ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲು ಕಾನೂನು ಸುವ್ಯವಸ್ಥೆಯನ್ನು ಸರಿ ಮಾಡಲು ಮುಂದಾದರು. ಹಲವು ಎನ್‌ಕೌಂಟರ್‌ಗಳು ದೇಶವ್ಯಾಪಿ ಸುದ್ದಿಯಾಗಿತ್ತು. ಈ ಮಧ್ಯೆ ಎನ್‌ಕೌಂಟರ್‌ ಭೀತಿಗೆ ಹೆದರಿ ಪರಾರಿಯಾಗಿದ್ದ ರೌಡಿಶೀಟರ್‌ಗಳು ಠಾಣೆಗೆ ಬಂದು ಶರಣಾಗಿದ್ದರು.

ಡಬಲ್‌ ಎಂಜಿನ್‌ ಸರ್ಕಾರ:
ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಬಿಜೆಪಿ ಸರ್ಕಾರ ಇದ್ದ ಕಾರಣ ಭಾರೀ ಸಂಖ್ಯೆಯ ಅಭಿವೃದ್ಧಿ ಯೋಜನೆಗಳು ಜಾರಿಯಾಗಿತ್ತು. ಎಕ್ಸ್‌ಪ್ರೆಸ್‌ವೇ, ರಕ್ಷಣಾ ಕೈಗಾರಿಕೆ, ಮೊಬೈಲ್‌ ಫ್ಯಾಕ್ಟರಿ ಸೇರಿದಂತೆ ಇತ್ಯಾದಿ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಅಭಿವೃದ್ಧಿ ಮಂತ್ರಗಳನ್ನು ಜಪಿಸಿ ಬಿಜೆಪಿ ಚುನಾವಣೆಗೆ ಹೋಗಿತ್ತು. ಚುನಾವಣೆಗೂ ಮೊದಲು ಮೋದಿ ಮತ್ತು ಯೋಗಿ ಮಧ್ಯೆ ಭಿನ್ನಾಭಿಪ್ರಾಯವಿದೆ ಎಂಬ ವದಂತಿ ಸುದ್ದಿಗಳು ಬಂದಿತ್ತು. ಆದರೆ ಮೋದಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಉಪಯೋಗಿ(ಉತ್ತರ ಪ್ರದೇಶ+ಯೋಗಿ ಆದಿತ್ಯನಾಥ್‌) ಎಂದು ಕರೆದು ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ತೋರಿಸಿದ್ದರು. ಇದನ್ನೂ ಓದಿ: ಜ್ಯೋತಿಷಿಗಳ ಭವಿಷ್ಯ – ಮಂಗಳ ಗ್ರಹದಿಂದ ಯೋಗಿಗೆ ಅದೃಷ್ಟ

ರಾಷ್ಟ್ರೀಯತೆ ಟ್ರಂಪ್‌ಕಾರ್ಡ್‌:
ಬಿಜೆಪಿ ಮೊದಲಿನಿಂದಲೂ ರಾಷ್ಟ್ರೀಯತೆ ವಿಚಾರವನ್ನೇ ಪ್ರಸ್ತಾಪ ಮಾಡುತ್ತಿದೆ. ಹೀಗಾಗಿ ಈ ಚುನಾವಣೆಯ ಸಮಯದಲ್ಲೂ ಪ್ರಧಾನಿ ಮೋದಿ ಉಕ್ರೇನ್‌ ಯುದ್ಧದ ವಿಚಾರವನ್ನು ಪ್ರಸ್ತಾಪಿಸಿ ಬಿಜೆಪಿಗೆ ನೀಡುವ ಮತ ದೇಶಕ್ಕೆ ನೀಡುವ ಮತ ಎಂದು ಹೇಳಿದ್ದರು.

ಹಿಂದುತ್ವದ ಜಪ:
ಪ್ರತಿ ಚುನಾವಣೆ ಬಂದಾಗ ಬಿಜೆಪಿ ರಾಮ ಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳುತ್ತಿತ್ತು. ಆದರೆ ಸುಪ್ರೀಂ ತೀರ್ಪಿನ ಬಳಿಕ ರಾಮ ಮಂದಿರ ನಿರ್ಮಾಣ ಕಾರ್ಯಕ್ಕ ಶಿಲಾನ್ಯಾಸ ಮಾಡಲಾಗಿದೆ. ರಾಮ ಮಂದಿರ ಶಿಲಾನ್ಯಾಸ ನಡೆದ ಬಳಿಕ ಕಳೆದ ವರ್ಷ ಕಾಶಿ ವಿಶ್ವನಾಥ ದೇವಾಲಯದ ಕಾರಿಡಾರ್‌ ನಿರ್ಮಾಣ ಮಾಡಲಾಗಿದೆ. ಪ್ರಧಾನಿ ಮೋದಿ ಅವರೇ ಭಾಗವಹಿಸಿ ಪೂಜೆಯಲ್ಲಿ ಭಾಗಿಯಾಗಿದ್ದರು. ಈ ಮೂಲಕ ಹಿಂದೂಗಳ  ಮತ್ತಷ್ಟು ವೋಟು ಬಿಜೆಪಿಗೆ ಬಿದ್ದಿದೆ.

ಕಿಸಾನ್‌ ಸಮ್ಮನ್‌ ಕಾರ್ಡ್:‌
ರೈತರಿಗೆ ನೀಡುವ ಧನ ಸಹಾಯ ಉತ್ತರ ಪ್ರದೇಶದಲ್ಲಿ ಯಶಸ್ವಿಯಾಗಿದೆ. ರೈತರ ಖಾತೆಗಳಿಗೆ ನೇರವಾಗಿ ಹಣವನ್ನು ಜಮೆ ಮಾಡುವ ಕಾರಣ ಸೋರಿಕೆಯನ್ನು ತಪ್ಪಿಸಲಾಗಿದೆ. ಕೃಷಿ ಕಾಯ್ದೆಗೆ ದೆಹಲಿ, ಪಂಜಾಬ್‌ನಲ್ಲಿ ವಿರೋಧ ವ್ಯಕ್ತವಾಗಿದ್ದರೂ ಉತ್ತರ ಪ್ರದೇಶದಲ್ಲಿ ರೈತರು ಬಿಜೆಪಿಯನ್ನು ಬೆಂಬಲಿಸಿರುವುದು ಚುನಾವಣೆಯಲ್ಲಿ ಸ್ಪಷ್ಟವಾಗಿದೆ.

ಸಮರ್ಥರಿಗೆ ಟಿಕೆಟ್‌ ಹಂಚಿಕೆ:
ಚುನಾವಣೆಗೂ ಮೊದಲು ಹಲವು ನಾಯಕರು ಬಿಜೆಪಿಯನ್ನು ತೊರೆದಿದ್ದರು. ಹೀಗಾಗಿ ಪಕ್ಷಕ್ಕೆ ಹಿನ್ನಡೆಯಾಗಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿತ್ತು. ಆದರೆ ಬಿಜೆಪಿ ನಾಯಕರು ಮಂತ್ರಿಯಾಗಿದ್ದರೂ ಸರಿಯಾಗಿ ಕೆಲಸ ಮಾಡದ್ದಕ್ಕೆ ಅವರಿಗೆ ಟಿಕೆಟ್‌ ನೀಡದೇ ಇರಲು ಪಕ್ಷ ತೀರ್ಮಾನಿಸಿತ್ತು. ಈ ಕಾರಣಕ್ಕೆ ಪಕ್ಷವನ್ನು ತೊರೆದಿದ್ದಾರೆ. ನಾವು ಸಮರ್ಥರಿಗೆ ಟಿಕೆಟ್‌ ನೀಡಿದ್ದೇವೆ ಎಂದು  ಬಿಜೆಪಿ ಹೇಳಿತ್ತು.

ಕುಂದಿದ ಮಾಯಾವತಿ ವರ್ಚಸ್ಸು:
ಮಾಜಿ ಮುಖ್ಯಮಂತ್ರಿ ಮಾಯಾವತಿ ಚುನಾವಣೆಗೂ ಮೊದಲೇ ಸೋಲನ್ನು ಅನುಭವಿಸಿದ್ದರು. ಅಬ್ಬರದ ಪ್ರಚಾರದಿಂದ ದೂರವಿದ್ದ ಬಿಎಸ್‌ಪಿ ಮತಗಳು ಬಿಜೆಪಿಗೆ ವಾಲಿರಬಹುದು ಎನ್ನಲಾಗುತ್ತಿದೆ.

ಕೃಷಿ ಕಾಯ್ದೆ:
ಉತ್ತರ ಪ್ರದೇಶ ಚುನಾವಣೆಯಲ್ಲಿ ಕೃಷಿ ಕಾಯ್ದೆ ಪ್ರಧಾನ ವಿಚಾರವಾಗಲಿದ್ದ ಹಿನ್ನೆಲೆಯಲ್ಲಿ ವಿಪಕ್ಷಗಳು ಈ ವಿಚಾರವನ್ನು ಇಟ್ಟುಕೊಂಡೇ ಬಿಜೆಪಿಯನ್ನು ಟೀಕಿಸುತ್ತಿದ್ದವು. ಕೃಷಿ ಕಾಯ್ದೆಯಿಂದ ಪಂಚ ರಾಜ್ಯಗಳ ಚುನಾವಣೆ ಮೇಲೆ ಹಿನ್ನಡೆಯಾಗಬಹುದು ಎಂಬ ಕಾರಣ ಕೇಂದ್ರ ಸರ್ಕಾರ ದಿಢೀರ್‌ ಎಂಬಂತೆ ಕಾಯ್ದೆಯನ್ನು ಹಿಂದಕ್ಕೆ ಪಡೆದಿತ್ತು. ಈ ಮೂಲಕ ವಿಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ಬಳಸಲು ಇಟ್ಟಿದ್ದ ಮುಖ್ಯ ಅಸ್ತ್ರವನ್ನು ಬಳಕೆ ಮಾಡದಂತೆ ತಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು.

ಕೈ ಹಿಡಿದ ಮಹಿಳಾ ಮತದಾರ:
ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ. ಉಜ್ವಲ ಯೋಜನೆ ಉತ್ತರ ಪ್ರದೇಶದಲ್ಲಿ ಕೆಲಸ ಮಾಡಿದೆ. ಮನೆ ಮನೆಗೆ ಗ್ಯಾಸ್‌, ವಿದ್ಯುತ್‌ ಸಂಪರ್ಕಗಳು ನೀಡಿದ್ದರಿಂದ ಮಹಿಳಾ ಮತದಾರರು ಮತವನ್ನು ಹಾಕಿ ಮತ್ತೆ ಬಿಜೆಪಿಗೆ ಅಧಿಕಾರ ನೀಡಿದ್ದಾರೆ.

ಹಿಜಬ್‌ ವಿವಾದ:
ಉಡುಪಿಯಲ್ಲಿ ಪ್ರಾರಂಭವಾದ ಹಿಜಬ್‌ ವಿವಾದ ಈ ಚುನಾವಣೆಯಲ್ಲೂ ಸದ್ದು ಮಾಡಿತ್ತು. ಉತ್ತರ ಪ್ರದೇಶದ ಕಾಲೇಜುಗಳಲ್ಲೂ ಗಲಾಟೆ ನಡೆದಿತ್ತು. ಈ ಕಾರಣಕ್ಕೆ ಯುವ ಸಮುದಾಯ ಬಿಜೆಪಿಗೆ ಮತ ಹಾಕಿರಬಹುದು ಎಂಬ ವಿಶ್ಲೇಷಣೆ ಬಂದಿದೆ.

Comments

Leave a Reply

Your email address will not be published. Required fields are marked *