2023ರ ಹೊತ್ತಿಗೆ ರಾಮಮಂದಿರ ಉದ್ಘಾಟನೆಗೆ ಸಿದ್ಧ: ಯೋಗಿ ಆದಿತ್ಯನಾಥ್‌

ಲಕ್ನೋ: ಅಯೋಧ್ಯೆ ರಾಮಮಂದಿರ 2023ರ ವೇಳೆಗೆ ಉದ್ಘಾಟನೆಗೆ ಸಿದ್ಧವಾಗಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಸ್ಪರ್ಧಿಸಿರುವ ಕರ್ಹಲ್‌ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ರ‍್ಯಾಲಿ ವೇಳೆ ಮಾತನಾಡಿದ ಯೋಗಿ ಆದಿತ್ಯನಾಥ್‌, ರಾಮಮಂದಿರವು ಭಾರತದ ರಾಷ್ಟ್ರ ಮಂದಿರವಾಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 1947ರಲ್ಲಿ ಭಾರತ ಹುಟ್ಟಲಿಲ್ಲ: ಪ್ರಧಾನಿ ಮೋದಿ

ಕೇಂದ್ರ ಮತ್ತು ರಾಜ್ಯದಲ್ಲಿನ ಡಬಲ್‌ ಎಂಜಿನ್‌ ಸರ್ಕಾರಗಳು ಜನರಿಗೆ ಡಬಲ್‌ ಡೋಸ್‌ ಪಡಿತರವನ್ನು ನೀಡುತ್ತಿವೆ. ಆದ್ದರಿಂದ ಮತಗಳು ಸಹ ಬಿಜೆಪಿಗೆ ಬರುತ್ತವೆ ಎಂದಿದ್ದಾರೆ.

2017ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಸರ್ಕಾರ ರಾಜ್ಯದಲ್ಲಿ 86 ಲಕ್ಷಕ್ಕೂ ಹೆಚ್ಚು ರೈತರ ಸಾಲ ಮನ್ನಾ ಮಾಡಿದೆ. ನಾವು ರೈತರಿಗೆ ಕೊಳವೆ ಬಾವಿಗಳ ಸೌಲಭ್ಯ ಮತ್ತು ನಿರಂತರ ವಿದ್ಯುತ್‌ ಸರಬರಾಜು ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ವಿಶ್ವದ ಸ್ವೀಟೆಸ್ಟ್‌ ಭಯೋತ್ಪಾದಕ: ಅರವಿಂದ್‌ ಕೇಜ್ರಿವಾಲ್‌

ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯದ ಪುನರಾಭಿವೃದ್ಧಿ ಕಾಮಗಾರಿಗಳ ಅನಾವರಣದೊಂದಿಗೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಆರಂಭಿಸಿತು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಪಕ್ಷವು ತನ್ನ ಪ್ರಮುಖ ಸಾಧನೆಗಳಲ್ಲಿ ಒಂದು ಎಂದು ಪ್ರತಿಪಾದಿಸುತ್ತಿದೆ.

ಫೆ.10ರಿಂದ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಆರಂಭವಾಗಿದ್ದು, ಏಳು ಹಂತಗಳಲ್ಲಿ ನಡೆಯಲಿದೆ. ಮಾ.10 ರಂದು ಫಲಿತಾಂಶ ಪ್ರಕಟವಾಗಲಿದೆ.

Comments

Leave a Reply

Your email address will not be published. Required fields are marked *