ಮಳೆಯ ನೀರಿನಲ್ಲಿ ಮುಳುಗಿದ 21 ಮಕ್ಕಳಿದ್ದ ಸ್ಕೂಲ್ ಬಸ್

ಲಕ್ನೋ: ಮಳೆ ನೀರು ತುಂಬಿದ್ದ ರೈಲ್ವೇ ಸೇತುವೆಯ ಕೆಳ ರಸ್ತೆ (ಅಂಡರ್ ಪಾಸ್)ನಲ್ಲಿ ಶಾಲೆಯೊಂದರ ಬಸ್ ಸಿಲುಕಿ, 21 ವಿದ್ಯಾರ್ಥಿಗಳು ಅದೃಷ್ಟವಶಾತ್ ಬದುಕಿಳಿದ ಘಟನೆ ಉತ್ತರ ಪ್ರದೇಶದ ಖಾರ್ಕೊಡ್‍ನಲ್ಲಿ ನಡೆದಿದೆ.

ಕಳೆದೆರಡು ದಿನಗಳಿಂದ ಭಾರೀ ಮಳೆಯಿಂದಾಗಿ ಕೇಳ ಸೇತುವೆ ಕೆಸರು ಮಿಶ್ರಿತ ನೀರಿನಿಂದ ತುಂಬಿತ್ತು. ಶುಕ್ರವಾರ ಸಂಜೆ ಮಕ್ಕಳನ್ನು ಮನೆಗೆ ಬಿಡಲು ಶಾಲಾ ಬಸ್ ಹೋಗಿತ್ತು. ಚಾಂದ್‍ಸರ ಸಮೀಪ ಸೇತುವೆಯ ಕೆಳಗೆ ಮಳೆ ನೀರು ತುಂಬಿರುವುದನ್ನು ಅರಿತ ಚಾಲಕ ಬಸ್ಸನ್ನು ಹಿಂದಕ್ಕೆ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಆದರೆ ಅಷ್ಟೋತ್ತಿಗಾಗಲೇ ಸೈಲೆನ್ಸರ್ ಮತ್ತು ಎಂಜಿನ್‍ಗೆ ನೀರು ನುಗ್ಗಿತ್ತು.

ನೀರಿನ ಮಟ್ಟ ಹೆಚ್ಚಾಗುತ್ತಿದಂತೆ ಬಸ್ಸಿನಲ್ಲಿದ್ದ ಮಕ್ಕಳು ಅಳಲು ಪ್ರಾರಂಭಿಸಿದರು. ತಕ್ಷಣವೇ ಜಾಗೃತರಾದ ಚಾಲಕ ಮತ್ತು ನಿರ್ವಾಹಕ ಮಕ್ಕಳನ್ನು ವಾಹನದಿಂದ ಹೊರಗಡೆ ತರಲು ಯತ್ನಿಸಿದರು. ಕೇವಲ ಇಬ್ಬರಿಂದ 21 ಮಕ್ಕಳನ್ನು ಸುರಕ್ಷಿತ ಜಾಗಕ್ಕೆ ಸಾಗಿಸುವುದು ಕಷ್ಟವಾಗಿತ್ತು.

ಮಕ್ಕಳು ಅಳುತ್ತಿರುವ ಹಾಗೂ ಚೀರುತ್ತಿರುವುದನ್ನು ಕೇಳಿದ ಚಾಂದ್‍ಸರ ಗ್ರಾಮಸ್ಥರು ಸ್ಥಳಕ್ಕೆ ಬಂದು, ವಾಹನ ಮುಳುಗುತ್ತಿರುವುದನ್ನು ನೋಡಿದ್ದಾರೆ. ಚಾಲಕ ಹಾಗೂ ನಿರ್ವಾಹಕರ ಜೊತೆ ಸೇರಿ ಬಸ್ ಕಿಟಕಿ, ಗಾಜು ಒಡೆದು ಮಕ್ಕಳ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಕೊನೆಗೆ ಬಸ್ ಸಂಪೂರ್ಣವಾಗಿ ಮುಳುಗಲು ಆರಂಭಿಸಿತ್ತು. ಆದರೆ ಬಸ್ಸಿನಲ್ಲಿ ಇನ್ನೂ ಒಂದು ಮಗು ಇದ್ದಿದ್ದನ್ನು ಅರಿತ ವ್ಯಕ್ತಿಯೊಬ್ಬರು ಧೈರ್ಯದಿಂದ ನೀರಿನಲ್ಲಿ ನುಗ್ಗಿ, ಕಿಟಕಿಯ ಮೂಲಕ ಮಗುವನ್ನು ಹೊರತರುವ ಮೂಲಕ ಎಲ್ಲ ಮಕ್ಕಳನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.

Comments

Leave a Reply

Your email address will not be published. Required fields are marked *