ಓವರ್‌ಟೇಕ್ ವೇಳೆ ವ್ಯಾನ್‍ಗೆ ಡಿಕ್ಕಿ ಹೊಡೆದ ಬಸ್ – ಸಾವಿನ ಸಂಖ್ಯೆ 17ಕ್ಕೆ ಏರಿಕೆ

ಲಕ್ನೋ: ಹತ್ರಾಸ್‍ನಲ್ಲಿ (Hathras) ಓವರ್‌ಟೇಕ್ ವೇಳೆ ಸಂಭವಿಸಿದ್ದ ಬಸ್ ಹಾಗೂ ವ್ಯಾನ್ ನಡುವಿನ ಅಪಘಾತದಲ್ಲಿ (Accident) ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.

ಚಿಕಿತ್ಸೆ ವೇಳೆ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 17ಕ್ಕೆ ತಲುಪಿದೆ. ಇನ್ನೂ ಹತ್ರಾಸ್‍ನಲ್ಲಿ 11 ಮಂದಿ ಮತ್ತು ಅಲಿಗಢದಲ್ಲಿ 5 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಗ್ರಾ-ಅಲಿಗಢ ರಾಷ್ಟ್ರೀಯ ಹೆದ್ದಾರಿ 93 ರಲ್ಲಿ ರಸ್ತೆಯಲ್ಲಿ ಬಸ್ ಹಿಂದಿನಿಂದ ವ್ಯಾನ್‍ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮಹಿಳೆಯರು ಮತ್ತು ವ್ಯಾನ್‍ನಲ್ಲಿ ಪ್ರಯಾಣಿಸುತ್ತಿದ್ದ ಮಕ್ಕಳು ಸೇರಿದಂತೆ 15 ಜನರು ಶುಕ್ರವಾರ ಸಾವನ್ನಪ್ಪಿದ್ದರು.

ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಆದಷ್ಟು ಬೇಗ ಅಪಘಾತಕ್ಕೆ ಕಾರಣನಾದ ಚಾಲಕನನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.‌

ಉತ್ತರ ಪ್ರದೇಶ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸ್ಥಳಕ್ಕೆ ಭೇಟಿ ನೀಡಿ, ಅಗತ್ಯ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದರು. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.