ಮದುವೆ ಸಂಭ್ರಮದಲ್ಲಿ ಗುಂಡು ಹಾರಿಸಿದ ವಧುವಿಗೆ ಬಂತು ಕುತ್ತು- ಪೊಲೀಸರಿಂದ ಹುಡುಕಾಟ

ಲಕ್ನೋ: ಮದುವೆಯ ಸಂಭ್ರಮದಲ್ಲಿದ್ದ ವಧುವೊಬ್ಬಳು (Bride) ವೇದಿಕೆಯ ಮೇಲೆ ರಿವಾಲ್ವರ್‌ನಿಂದ 4 ಬಾರಿ ಗುಂಡು ಹಾರಿಸಿದ್ದಾಳೆ. ಇದೀಗ ಈ ಸಂಭ್ರಮವೇ ಆಕೆಯ ಪಾಲಿಗೆ ಕುತ್ತು ತಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಕೆಗಾಗಿ ಹುಡುಕಾಟ ನಡೆಸುತ್ತಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ (Uttar Pradesh) ಹತ್ರಾಸ್ (Hathras) ಜಂಕ್ಷನ್ ಪ್ರದೇಶದ ಸೇಲಂಪುರ ಗ್ರಾಮದಲ್ಲಿ ವಿವಾಹ ಸಮಾರಂಭ ನಡೆಯುತ್ತಿತ್ತು. ಈ ವೇಳೆ ವಧು, ವರ (Groom) ಪರಸ್ಪರ ಹಾರ ಹಾಕಿಕೊಂಡು ಸಂಬಂಧಿಕರಿಂದ ಆಶೀರ್ವಾದ ಪಡೆದಿದ್ದಾರೆ. ಅದಾದ ಬಳಿಕ ಅವರಿಬ್ಬರು ಫೋಟೋಗೆ ಪೋಸ್ ನೀಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ವ್ಯಕ್ತಿಯೊಬ್ಬ ವಧುವಿಗೆ ರಿವಾಲ್ವರ್ ಅನ್ನು ನೀಡಿದ್ದಾನೆ. ಆ ರಿವಾಲ್ವರನ್ನು ತೆಗೆದುಕೊಂಡ ವಧು 5 ಸೆಕೆಂಡುಗಳಲ್ಲಿ ನಾಲ್ಕು ಗುಂಡು ಹಾರಿಸಿ ಸಂಭ್ರಮಿಸಿದ್ದಾಳೆ. ಈ ವೀಡಿಯೋವನ್ನು ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೀಡಿಯೋದಲ್ಲಿ ಏನಿದೆ?: ಕಪ್ಪು ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬ ವೇದಿಕೆಯ ಮೇಲೆ ಹತ್ತಿ ವಧುವಿನ ಬಳಿ ನಿಂತಿದ್ದಾನೆ. ಸ್ವಲ್ಪ ಸಮಯದ ನಂತರ ಆತ ತನ್ನ ಬಳಿಯಿದ್ದ ಲೋಡ್ ಮಾಡಿದ ರಿವಾಲ್ವರ್ (Revolver) ಹೊರತೆಗೆದು ವಧುವಿನ ಕೈಗೆ ಕೊಟ್ಟಿದ್ದಾನೆ. ನಂತರ ವರನ ಜೊತೆಗೆ ವೇದಿಕೆಯ ಮೇಲೆ ಕುಳಿತಿದ್ದ ವಧು ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಗುಂಡಿನ ದಾಳಿ ನಡೆಸುತ್ತಾಳೆ. ಈ ವೇಳೆ ಗನ್‍ನಿಂದ ನಿರಂತರವಾಗಿ 4 ಬಾರಿ ಗುಂಡನ್ನು ಹಾರಿಸುತ್ತಾಳೆ. ಇದಾದ ಬಳಿಕ ವಧು ಆ ವ್ಯಕ್ತಿಗೆ ಗನ್‍ನನ್ನು ವಾಪಸ್ ನೀಡುತ್ತಾಳೆ. ಇದನ್ನೂ ಓದಿ: ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಮೊದಲೇ ಬಿಜೆಪಿ ಕಚೇರಿಗೆ ಬಿಗಿ ಭದ್ರತೆ

ವೀಡಿಯೋ ವೈರಲ್ ಆಗುತ್ತಿದ್ದಂತೆ ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಪ್ರಕರಣ ದಾಖಲಾಗುತ್ತಿದ್ದಂತೆ ವಧು ನಾಪತ್ತೆ ಆಗಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಎಎಸ್‍ಪಿ ಮಾತನಾಡಿ, ವೀಡಿಯೋ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಶೀಘ್ರದಲ್ಲೇ ವಧುವಿನ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಲಾಗುವುದು. ರಿವಾಲ್ವರ್ ಹಿಡಿದಿದ್ದ ವ್ಯಕ್ತಿಯನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಭಾರೀ ಟೀಕೆಯ ಬಳಿಕ ಬಾಲಕನ ಬಳಿ ಕ್ಷಮೆ ಕೇಳಿದ ದಲೈ ಲಾಮಾ