ಇಂದಿನಿಂದ ಸಬ್ಸಿಡಿರಹಿತ ಎಲ್‍ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 100 ರೂ. ಇಳಿಕೆ

ನವದೆಹಲಿ: ಅಡುಗೆ ಅನಿಲ ಸಿಲಿಂಡರ್ ಬೆಲೆ ಇಂದಿನಿಂದ ಕಡಿಮೆಯಾಗಲಿದ್ದು, ಸಬ್ಸಿಡಿರಹಿತ ಎಲ್‍ಪಿಜಿ ಸಿಲಿಂಡರ್ ನ ಬೆಲೆಯಲ್ಲಿ ರೂ.100 ರೂ. ಇಳಿಕೆಯಾಗಲಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿಕೆಯಾಗುತ್ತಿರುವ ಹಿನ್ನೆಲೆ ಎಲ್‍ಪಿಜಿ ದರದಲ್ಲೂ ಇಳಿಕೆಯಾಗಿದೆ. ಸಬ್ಸಿಡಿರಹಿತ ಅಥವಾ ಮಾರುಕಟ್ಟೆಯಲ್ಲಿನ ಎಲ್‍ಪಿಜಿ ಸಿಲಿಂಡರ್ ದರ 737.50 ಯಿಂದ 637ಕ್ಕೆ ಇಳಿಯಲಿದೆ.

ಸದ್ಯ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆಯಾಗಿದ ಹಿನ್ನೆಲೆಯಲ್ಲಿ ಎಲ್‍ಪಿಜಿ ಸಿಲಿಂಡರ್ ಬೆಲೆ ಪರಿಷ್ಕರಣೆಯಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ತಿಳಿಸಿದೆ.

ಗೃಹ ಬಳಕೆಗೆ ಒಂದು ಕುಟುಂಬಕ್ಕೆ ವಾರ್ಷಿಕ 12 ಸಿಲಿಂಡರ್‌ಗಳನ್ನು (ಸಬ್ಸಿಡಿ ಸಹಿತ) ಸರ್ಕಾರ ವಿತರಿಸುತ್ತದೆ. ಪ್ರತಿ ಸಿಲಿಂಡರ್ 737.50 ರೂ. ಬೆಲೆ ಬೀಳುತ್ತದೆ. ಆದರೆ ಸಬ್ಸಿಡಿ ಸಹಿತ ಇದರ ಬೆಲೆ 494.35 ರೂಪಾಯಿ ಮಾತ್ರ. ಉಳಿದ 142.65 ರೂ. ಸಬ್ಸಿಡಿ ಮೊತ್ತವನ್ನು ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.

ಇಂಡಿಯನ್ ಆಯಿಲ್ ಪ್ರಕಾರ, ಜೂನ್ 1 ರಿಂದ ಜಾರಿಗೆ ಬರುವಂತೆ ಶೇ3.65 ರಷ್ಟು ಬೆಲೆ ಏರಿಕೆ ಕಂಡ ಒಂದು ತಿಂಗಳ ನಂತರ ಈ ಕಡಿತವು ಬರುತ್ತದೆ. ಆದ್ದರಿಂದ ಹಿಂದಿನ ತಿಂಗಳಿಗೆ ಹೋಲಿಸಿದರೆ ಸಿಲಿಂಡರ್‍ಗೆ 25 ರೂ. ಏರಿಕೆಯಾಗಿತ್ತು ಎಂದಿದೆ.

ಎಲ್‍ಪಿಜಿ ಬೆಲೆಗಳ ಏರಿಕೆಯು ಪ್ರತಿಪಕ್ಷಗಳಿಂದ ಆಕ್ಷೇಪಣೆಯನ್ನು ಉಂಟುಮಾಡಿತ್ತು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ರಾಜ್ಯವ್ಯಾಪಿ ಆಂದೋಲನವನ್ನು ನಡೆಸುವ ಬೆದರಿಕೆ ಕೂಡ ಹಾಕಿದ್ದರು. “ಚುನಾವಣೆಯ ನಂತರ ಎಲ್‍ಪಿಜಿ ಬೆಲೆಗಳನ್ನು ಏಕೆ ಹೆಚ್ಚಿಸಲಾಯಿತು? ಅನಿಲ ಬೆಲೆ ಏರಿಕೆಯನ್ನು ನಾವು ಖಂಡಿಸುತ್ತೇವೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರಸ್ತುತವಾಗಿ ಮನೆಬಳಕೆಗೆ ಓರ್ವ ಗ್ರಾಹಕನಿಗೆ ಒಂದು ವರ್ಷದಲ್ಲಿ ತಲಾ 14.2 ಕೆ.ಜಿಯ 12 ಸಿಲಿಂಡರ್‌ಗಳಿಗೆ ಮಾತ್ರ ಸರ್ಕಾರ ಸಬ್ಸಿಡಿ ನೀಡುತ್ತದೆ. ಅದಕ್ಕಿಂತ ಯಾವುದೇ ಹೆಚ್ಚುವರಿ ಖರೀದಿಗಳಿಗಾಗಿ ಗ್ರಾಹಕರು ಮಾರುಕಟ್ಟೆ ಬೆಲೆಯನ್ನು ಭರಿಸಬೇಕಾಗುತ್ತದೆ. ಅಂತರರಾಷ್ಟ್ರೀಯ ಮಾನದಂಡದ ಪ್ರಕಾರ ಎಲ್‍ಪಿಜಿ ಬೆಲೆಗಳು ಮತ್ತು ವಿದೇಶಿ ವಿನಿಮಯ ದರಗಳಲ್ಲಿನ ಬದಲಾವಣೆಗಳನ್ನು ಅವಲಂಬಿಸಿ ಸಬ್ಸಿಡಿಯ ವ್ಯಾಪ್ತಿಯು ತಿಂಗಳಿನಿಂದ ತಿಂಗಳಿಗೆ ಬದಲಾಗುತ್ತಿರುತ್ತದೆ.

Comments

Leave a Reply

Your email address will not be published. Required fields are marked *