ವಿದೇಶದಲ್ಲಿ ಪ್ಲಾಸ್ಟಿಕ್ ಸರ್ಜರಿ, ಫೋಟೋ ಗುರುತು ಸಿಗದೆ ಮನೆಗೆ ವಾಪಸ್ ಬರೋಕೆ ಪರದಾಡಿದ ಮಹಿಳೆಯರು!

ಬೀಜಿಂಗ್: ವಿದೇಶಕ್ಕೆ ಹೋಗಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಮೂವರು ಚೀನಾ ಮಹಿಳೆಯರು ಮನೆಗೆ ವಾಪಸ್ ಬರಲು ಪರದಾಡಿದ ಘಟನೆ ನಡೆದಿದೆ.

ಚೀನಾದ ವಾರ್ಷಿಕ ಗೋಲ್ಡನ್ ವೀಕ್ ರಜೆ ವೇಳೆ ಈ ಮೂವರು ಮಹಿಳೆಯರು ದಕ್ಷಿಣ ಕೊರಿಯಾಗೆ ಹೋಗಿದ್ದರು. ಆದ್ರೆ ವಾಪಸ್ ಬರೋ ವೇಳೆ ಮಹಿಳೆಯರು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ತಮ್ಮ ಗುರುತನ್ನ ದೃಢಪಡಿಸಲು ಸಾಧ್ಯವಾಗ್ಲಿಲ್ಲ. ಯಾಕಂದ್ರೆ ಮಹಿಳೆಯರು ಪಾಸ್‍ಪೋರ್ಟ್ ಫೋಟೋದಲ್ಲಿ ಇದ್ದಂತೆ ಕಾಣಿಸುತ್ತಿರಲಿಲ್ಲ. ಪ್ಲಾಸ್ಟಿಕ್ ಸರ್ಜರಿ ನಂತರ ಅವರ ಮುಖ ತುಂಬಾ ಊದಿಕೊಂಡು ಬ್ಯಾಂಡೇಜ್ ಸುತ್ತಲಾಗಿತ್ತು. ಸುಂದರವಾಗಿ ಕಾಣ್ಬೇಕು ಅಂತ ಸರ್ಜರಿ ಮಾಡಿಸಿಕೊಂಡವರು ಫೋಟೋದಲ್ಲಿರೋದು ನಾವೇ ಅಂದ್ರೂ ನಂಬೋ ಸ್ಥಿತಿಯಲ್ಲಿ ಭದ್ರತಾ ಸಿಬ್ಬಂದಿ ಇರ್ಲಿಲ್ಲ.

ಈ ಮೂವರು ಮಹಿಳೆಯರು ಮುಖಕ್ಕೆ ಬ್ಯಾಂಡೇಜ್ ಸುತ್ತಿಕೊಂಡು ಕೈಯಲ್ಲಿ ಪಾಸ್‍ಪೋರ್ಟ್ ಹಿಡಿದು ವಿಮಾನ ನಿಲ್ದಾಣದಲ್ಲಿ ಕುಳಿತಿರೋ ಫೋಟೋವನ್ನ ಚೀನಾ ಸುದ್ದಿ ವಾಹಿನಿಯೊಂದರ ನಿರೂಪಕಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ರು. ನಂತರ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇಲ್ಲಿನ ಪತ್ರಿಕೆಯೊಂದರ ವರದಿಯ ಪ್ರಕಾರ ಮಹಿಳೆಯರನ್ನು ಕೊರಿಯಾ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದ್ರೆ ಇವರಿಗೆ ಚೀನಾಗೆ ವಾಪಸ್ ಹೋಗಲು ಅವಕಾಶ ನೀಡಲಾಯ್ತಾ ಇಲ್ಲವಾ ಎಂಬ ಬಗ್ಗೆ ಈವರೆಗೆ ವರದಿಯಾಗಿಲ್ಲ.

 

Comments

Leave a Reply

Your email address will not be published. Required fields are marked *