ಅನಧಿಕೃತ ರೆಸಾರ್ಟ್ ತೆರವುಗೊಳಿಸದಿದ್ದರೆ ನೀವೇ ಹೊಣೆ- 4 ಅಧಿಕಾರಿಗಳಿಗೆ ಕೊಪ್ಪಳ ಡಿಸಿ ನೋಟಿಸ್

ಕೊಪ್ಪಳ: ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹಂಪಿ ಪಕ್ಕದ ವಿರೂಪಾಪೂರ ಗಡ್ಡಿಯ ಅಕ್ರಮ ರೆಸಾರ್ಟ್ ಗಳನ್ನು ಕೊಪ್ಪಳ ಜಿಲ್ಲಾಡಳಿತ ನೆಲಸಮ ಮಾಡಿತ್ತು. ಈ ಬೆನ್ನಲ್ಲೇ ರೆಸಾರ್ಟ್ ಮಾಲೀಕರು ಪಟ್ಟಾ ಭೂಮಿಯಲ್ಲಿ ಅನಧಿಕೃತವಾಗಿ ರೆಸಾರ್ಟ್ ನಿರ್ಮಾಣ ಮಾಡಿರುವ ಆರೋಪ ಈಗ ಮತ್ತೆ ಕೇಳಿ ಬಂದಿದೆ. ಇದಕ್ಕೂ ಕೊಪ್ಪಳ ಜಿಲ್ಲಾಡಳಿತ ಬ್ರೇಕ್ ಹಾಕಲು ಮುಂದಾಗಿದೆ.

ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯ ಹಂಪಿ ಪ್ರದೇಶ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ರೆಸಾರ್ಟ್ ಗಳನ್ನು ತೆರವು ಮಾಡಿ. ಇಲ್ಲವೇ ಅದಕ್ಕೆ ನೀವೇ ಹೊಣೆಗಾರರಾಗಿ ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಅವರು ನೋಟಿಸ್ ನೀಡಿದ್ದಾರೆ. ಹಂಪಿ ಪರಂಪರೆ ಪ್ರದೇಶ ವ್ಯಾಪ್ತಿಗೆ ಒಳಪಡುವ ಕೊಪ್ಪಳದ ಗಂಗಾವತಿ ತಾಲೂಕಿನ ವಿರೂಪಾಪೂರ ಗಡ್ಡಿಯಲ್ಲಿದ್ದ ಅಕ್ರಮ ರೆಸಾರ್ಟ್ ಗಳು ಕಳೆದ 2 ವರ್ಷದ ಹಿಂದೆ ನೆಲಸಮ ಆಗಿದ್ದವು. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಡಳಿತ ಇಲ್ಲಿನ ರೆಸಾರ್ಟ್ ಗಳನ್ನು ತೆರವು ಮಾಡಿತ್ತು. ಇದನ್ನೂ ಓದಿ: ಪಡಿತರ ಅಕ್ಕಿ ಅಕ್ರಮವಾಗಿ ಗುಜರಾತ್‍ಗೆ ಸಾಗಣೆ- 8.10 ಲಕ್ಷದ ಅಕ್ಕಿ ವಶಕ್ಕೆ

ವಿರೂಪಾಪೂರ ಗಡ್ಡಿಯಲ್ಲಿನ ರೆಸಾರ್ಟ್ ನೆಲಸಮ ಆದ ನಂತರ ಗಂಗಾವತಿ ತಾಲೂಕಿನ ಆನೇಗೊಂದಿ, ಹನುಮನಹಳ್ಳಿ, ಜಂಗ್ಲಿ, ಸಣಾಪೂರ, ರಂಗಾಪೂರ, ಗಡ್ಡಿ, ಪಂಪಾ ಸರೋವರ ಸುತ್ತಮುತ್ತ ಪಟ್ಟಾ ಭೂಮಿಯಲ್ಲಿ ಮತ್ತೆ ಅಕ್ರಮವಾಗಿ ರೆಸಾರ್ಟ್ ಗಳು ತಲೆ ಎತ್ತುತ್ತಿವೆ. ಈ ಕಾರಣಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಅವರು ಹೊಸಪೇಟೆಯ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ಕೊಪ್ಪಳ ಉಪ ವಿಭಾಗಾಧಿಕಾರಿ, ಗಂಗಾವತಿಯ ತಹಸೀಲ್ದಾರ್ ಮತ್ತು ತಾಲೂಕು ಪಂಚಾಯತ್ ಇಒಗೆ ನೊಟೀಸ್ ನೀಡಿದ್ದಾರೆ.

ಕೋರ್ಟ್ ನಿರ್ದೇಶನದಂತೆ ಹಂಪಿ ಪ್ರದೇಶ ವ್ಯಾಪ್ತಿಗೆ ಒಳಪಡುವ 15 ಗ್ರಾಮಗಳಲ್ಲಿ ಮಾಸ್ಟರ್ ಪ್ಲ್ಯಾನ್ ರೆಡಿ ಆಗುತ್ತಿದೆ. ಯಾವ ಜಾಗದಲ್ಲಿ, ಎಂಥ ಕಟ್ಟಡ ನಿರ್ಮಿಸಬಹುದು ಎಂಬುದರ ಬಗ್ಗೆ ಸ್ಪಷ್ಟಪಡುಸುವುದೇ ಈ ಮಾಸ್ಟರ್ ಪ್ಲಾನ್. ಆದರೆ ಕೆಲ ಪ್ರಭಾವಿಗಳು ಈಗಾಗಲೇ ಪಟ್ಟಾ ಭೂಮಿಯಲ್ಲಿ ಅನಧಿಕೃತವಾಗಿ ರೆಸಾರ್ಟ್ ನಿರ್ಮಿಸಿದ್ದಾರೆ. ಭೂಮಿ ಎನ್ ಎ ಮಾಡಿಲ್ಲ. ಜೊತೆಗೆ ಸ್ಥಳೀಯ ಸಂಸ್ಥೆಗಳ ಪರವಾನಗಿ ಇಲ್ಲದೇ ರೆಸಾರ್ಟ್ ನಿರ್ಮಾಣ ಮಾಡುತ್ತಿದ್ದಾರೆ. ಇದನ್ನೂ ಓದಿ: ನನ್ನ ಮಗಳ ಸಾವಿಗೆ ತೆಲುಗು ನಟ ಕಾರಣ- ಸೌಜನ್ಯ ತಂದೆ ದೂರು

ವಿರೂಪಾಪುರ ಗಡ್ಡಿಯಲ್ಲಿದ್ದ ರೆಸಾರ್ಟ್ ತೆರವಿನ ನಂತರ ಎಲ್ಲಂದರಲ್ಲಿ ರೆಸಾರ್ಟ್ ತಲೆ ಎತ್ತುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂಬ ದೂರು ಕೇಳಿ ಬಂದಿದೆ. ಹೀಗಾಗಿ ಕೊಪ್ಪಳ ಡಿಸಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನೆರೆ ರಾಜ್ಯ ಮತ್ತು ವಿದೇಶಿ ಪ್ರವಾಸಿಗರಿಗಾಗಿಯೇ ತಲೆ ಎತ್ತುವ ರೆಸಾರ್ಟ್ ಗಳು ಅಕ್ರಮ ಚಟುವಟಿಕೆ ತಾಣವಾಗಿವೆ ಎಂಬ ಆರೋಪ ಕೂಡ ಮೊದಲಿಂದಲೂ ಕೇಳಿ ಬಂದಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.

Comments

Leave a Reply

Your email address will not be published. Required fields are marked *