ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಭಾಗಿ: ಸಿಬಿಐ

ದೆಹಲಿ: ಉನ್ನಾವೋದ 17 ವರ್ಷದ ಬಾಲಕಿ ಮೇಲೆ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅತ್ಯಾಚಾರ ಎಸಗಿದ್ದಾನೆ ಎಂದು ಬಂಧನಕ್ಕೆ ಒಳಗಾದ ಸಹಾಯಕ ತಿಳಿಸಿದ್ದಾನೆ ಎಂದು ಸಿಬಿಐ ತಿಳಿಸಿದೆ.

ಮುಂದೆ ಉದ್ಯೋಗ ನೀಡುತ್ತೇನೆ ಎಂದು ಆಶ್ವಾಸನೆ ನೀಡಿ ಕುಲದೀಪ್ ಸಿಂಗ್ ಸೆಂಗಾರ್ ಮತ್ತು ಸಂಗಡಿಗರು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಸಿಬಿಐ ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ.

ಈ ಸಂಬಂಧ ಕುಲದೀಪ್ ಸಹಾಯಕನನ್ನು ಸಿಬಿಐ ವಶಕ್ಕೆ ಪಡೆದಿತ್ತು. ತೀವ್ರ ತನಿಖೆ ನಡೆಸಿದ ವೇಳೆ ಆರೋಪಿ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2017ರ ಜೂ.4ರಂದು ಉತ್ತರಪ್ರದೇಶದ ಮಖಿ ಗ್ರಾಮದಲ್ಲಿನ ಮನೆಯೊಂದರಲ್ಲಿ ಕುಲದೀಪ್ ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾನೆ. ಈ ವೇಳೆ ತಾನು ಬಾಗಿಲು ಕಾಯುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಸಂಬಂಧ ಶಾಸಕನ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಬಾಲಕಿಯನ್ನು ಮತ್ತೆ ಜೂ.11 ರಂದು ಶುಭಾಸಿಂಗ್ ಅವಧ್ ನಾರಾಯಣ ಹಾಗೂ ಬ್ರಿಜೇಶ್ ಯಾದವ್ ಅಪಹರಿಸಿದ್ದು, ಜೂ. 19ರ ವರೆಗೆ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿರುವ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.

ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಬಾಲಕಿ ಜೂ.20 ರಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಶಾಸಕ ಕುಲದೀಪ್ ಸಿಂಗ್ ವಿರುದ್ಧ ಎಫ್‍ಐಆರ್ ದಾಖಲು ಮಾಡಿಕೊಂಡಿರಲಿಲ್ಲ. ಅಲ್ಲದೇ, ಸ್ಥಳೀಯ ಪೊಲೀಸರು ನಡೆಸಿದ ತನಿಖೆಯ ಬಳಿಕ ಸಲ್ಲಿಸಿದ ಆರೋಪ ಪಟ್ಟಿಯಲ್ಲಿಯೂ ಕುಲದೀಪ್ ಹೆಸರಿರಲಿಲ್ಲ. ಈ ಪ್ರಕರಣ ದೇಶದೆಲ್ಲೆಡೆ ಚರ್ಚೆಗೆ ಗ್ರಾಸವಾದ ಸರ್ಕಾರ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು. ನಂತರ ಸಿಬಿಐ ಶಾಸಕನ ವಿರುದ್ಧ ಎಫ್‍ಐಆರ್ ದಾಖಲಿಸಿ ಬಂಧಿಸಿತ್ತು.

ಕುಲದೀಪ್ ಪ್ರಭಾವಿ ವ್ಯಕ್ತಿಯಾಗಿದ್ದರಿಂದ, ಬಾಲಕಿ ವೈದ್ಯಕೀಯ ತಪಾಸಣೆ ನಡೆಸುವಲ್ಲಿ ಉದ್ದೇಶಪೂರ್ವಕವಾಗಿ ತಡ ಮಾಡಲಾಗಿದೆ. ಅಲ್ಲದೇ, ಯುವತಿ ಧರಿಸಿದ್ದ ಉಡುಗೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಲ್ಲ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮೂರು ಎಫ್‍ಐಆರ್ ದಾಖಲು ಮಾಡಿದೆ. ಕುಲದೀಪ್ ಹಾಗೂ ಆತನ ಸಹಚರನ ವಿರುದ್ಧ ಒಂದು ಎಫ್‍ಐಆರ್ ದಾಖಲಾಗಿದ್ದರೆ, ಸಂತ್ರಸ್ತೆಯ ಕುಟುಂಬ ಯೋಗಿ ಆದಿತ್ಯನಾಥ್ ನಿವಾಸದ ಮುಂದೆ ಪ್ರತಿಭಟನೆ ನಡೆಸುವ ವೇಳೆ ನಡೆದ ಗಲಾಟೆಯ ಸಂಬಂಧಿಸಿದಂತೆ ಸ್ಥಳೀಯರ ವಿರುದ್ಧ ಎರಡನೇ ಎಫ್‍ಐಆರ್ ದಾಖಲಾಗಿದೆ. ನ್ಯಾಯಾಂಗ ಬಂಧನದಲ್ಲಿದ್ದ ಸಂತ್ರಸ್ತೆಯ ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ಮೂರನೇ ಎಫ್‍ಐಆರ್ ದಾಖಲಾಗಿದೆ.

Comments

Leave a Reply

Your email address will not be published. Required fields are marked *