ಕನ್ನಡದ ಬಗ್ಗೆ ನೀವೇನು ಮಾತನಾಡೋದು: ಪ್ರತಿಭಟನೆ ವೇಳೆ ಮಹಿಳೆಯಿಂದ ವಾಟಾಳ್‍ಗೆ ಕ್ಲಾಸ್

ಬೆಂಗಳೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡ ಎಂದು ವಾಟಾಳ್ ನಾಗರಾಜ್ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಸ್ಥಳಕ್ಕೆ ಆಗಮಿಸಿ ಅಪರಿಚಿತ ಮಹಿಳೆಯೊಬ್ಬಳು ಕ್ಲಾಸ್ ತೆಗೆದುಕೊಂಡಿದ್ದಾಳೆ.

ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ವಾಟಾಳ್ ನಾಗರಾಜ್ ನಡೆಸುತ್ತಿದ್ದ ಪ್ರತಿಭಟನೆಯ ವೇಳೆ ಮಹಿಳೆಯೊಬ್ಬಳು ಆಗಮಿಸಿ, ಕನ್ನಡದ ಬಗ್ಗೆ ನೀವೇನು ಮಾತನಾಡೋದು ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾಳೆ.

ನಾನು ಉಪ್ಪಿನ ಸತ್ಯಾಗ್ರಹ ಮಾಡಿದ್ದೀನಿ, ಕರಾಳ ಸತ್ಯಾಗ್ರಹ ಮಾಡಿದ್ದೀನಿ. ಕನ್ನಡದ ಬಗ್ಗೆ ನೀವೇನು ಮಾತನಾಡುವುದು ಎಂದು ಪ್ರಶ್ನಿಸಿದ್ದಾಳೆ. ಈ ವೇಳೆ ಆಕೆಯನ್ನು ಹಿಡಿದು ಹೊರಗಡೆ ಕಳುಹಿಸಲು ಮುಂದಾದ ಬೆಂಬಲಿಗನಿಗೆ ಡೊಂಟ್ ಟಚ್ ಮೈ ಎಂದು ಹೇಳಿದ್ದಾಳೆ.

ಜೋಳದ ರೊಟ್ಟಿ ಉತ್ತರ ಕರ್ನಾಟಕ, ರಾಗಿ ಮುದ್ದೆ ದಕ್ಷಿಣ ಕರ್ನಾಟಕ ಇದರ ಸಂಕೇತವಾಗಿ ಬಹಿರಂಗವಾಗಿ ಕುಳಿತು ಊಟ ಮಾಡುವ ಮೂಲಕ ಪ್ರತ್ಯೇಕ ಉತ್ತರ ಕರ್ನಾಟಕದ ಕೂಗನ್ನ ವಿರೋಧಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.

ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ನಿಜ. ಆದ್ರೆ ಕರ್ನಾಟಕವನ್ನ ಯಾವುದೇ ಕಾರಣಕ್ಕೂ ಎರಡು ಭಾಗ ಮಾಡಬೇಡಿ. ಅಖಂಡ ಕರ್ನಾಟಕ ಎಲ್ಲರಿಗೂ ಬೇಕಾಗಿದೆ. ಕರ್ನಾಟಕ ಏಕೀಕರಣಕ್ಕಾಗಿ ಅನೇಕ ಮಹನೀಯರು ಹೋರಾಟ ನಡೆಸಿದ್ದಾರೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿರುವುದು ನಿಜ. ಈ ಕುರಿತು ಬಿಜೆಪಿಯವರು ಮೊಸಳೆ ಕಣ್ಣೀರು ಹಾಕ್ತಿದ್ದಾರೆ. ಅವರಿಗೆ ಇಷ್ಟು ದಿನ ಮಹಾದಾಯಿ ವಿಚಾರ ಕುರಿತು ಏಕೆ ಮಾತನಾಡಲಿಲ್ಲ, ಉತ್ತರ ಕರ್ನಾಟಕ ಜನರ ನೋವು ನಿಮಗೆ ಗೊತ್ತಾಗಲ್ವಾ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಇಬ್ಭಾಗ ಮಾಡಿದ್ರೆ ಬೀದರ್ ನಿಂದ ಚಾಮರಾಜನಗರದಿಂದ ಪ್ರತಿಭಟನೆ ಮಾಡ್ತೇವೆ. ನಾಳೆ ಬೆಳಿಗ್ಗೆ ಈ ಬಗ್ಗೆ ಸಭೆ ಸೇರಿ ಅಖಂಡ ಕರ್ನಾಟಕ ಬಂದ್ ಮಾಡುವ ಬಗ್ಗೆ ಚರ್ಚೆ ಮಾಡಿ ತೀರ್ಮಾನಿಸುವುದಾಗಿ ವಾಟಾಳ್ ನಾಗರಾಜ್ ಹೇಳಿದರು.

Comments

Leave a Reply

Your email address will not be published. Required fields are marked *