ಹುಬ್ಬಳ್ಳಿ: ಸತ್ಯ ಒಂದಲ್ಲ ಒಂದಿನ ಹೊರಗೆ ಬರುತ್ತದೆ ಅನ್ನೋದಕ್ಕೆ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರ ಹೇಳಿಕೆಯೇ ಉದಾಹರಣೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮೈತ್ರಿ ಸರ್ಕಾರದ ಪತನ ಕುರಿತು ದೇವೇಗೌಡ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿ, ಮೈತ್ರಿ ಸರ್ಕಾರದ ಒಳ ಜಗಳದಿಂದಾಗಿ ಸರ್ಕಾರ ಪತನಗೊಂಡಿದೆ. ಈ ಬಗ್ಗೆ ಈ ಹಿಂದೆಯೇ ನಾನು ಹೇಳಿದ್ದೆ. ಬಿಜೆಪಿಯವರೇ ಮೈತ್ರಿ ಸರ್ಕಾರ ಉರುಳಿಸುತ್ತಿದ್ದಾರೆ ಎಂದು ಜನರ ಮುಂದೆ ಬಿಂಬಿಸಿದ್ದರು. ಆದರೆ ಸತ್ಯ ಒಂದಿಲ್ಲ ಒಂದಿನ ಹೊರಬರುತ್ತದೆ ಅನ್ನೋದಕ್ಕೆ ದೇವೇಗೌಡರು ಹೇಳಿಕೆನೇ ಉದಾಹರಣೆ ಎಂದು ತಿಳಿಸಿದರು.

ಅಧಿಕಾರದ ವ್ಯಾಮೋಹದಿಂದ ಮೈತ್ರಿ ಸರ್ಕಾರ ರಚನೆ ಮಾಡಿದರು. ಆದರೆ ತಮ್ಮ ಒಳ ಬೇಗುದಿಯಿಂದಾಗಿ ಮೈತ್ರಿ ಸರ್ಕಾರ ಅಧೋಗತಿಗೆ ಬಂತು. ಕಾಂಗ್ರೆಸ್ ಪಕ್ಷ ದೇಶದಲ್ಲೇ ಬೌದ್ಧಿಕ ದಿವಾಳಿಕೋರತನಕ್ಕೆ ಸಾಕ್ಷಿಯಾಗಿದೆ. ಪಿ ಚಿದಂಬರಂ ಅವರು ನೆಲದ ಕಾನೂನಿಗೆ ಬೆಲೆ ಇಲ್ಲದಂತೆ ನಡೆದುಕೊಂಡಿದ್ದಾರೆ. ರಾಜ್ಯ ಹಾಗೂ ದೇಶದಲ್ಲಿ ಕಾಂಗ್ರೆಸ್ ಅಧೋಗತಿಗೆ ತೆರಳಿದೆ. ಕಾಂಗ್ರೆಸ್ ನವರಿಗೆ ಯಾವುದನ್ನ ವಿರೋಧ ಮಾಡಬೇಕು ಎಂಬುದು ತಿಳಿದಿಲ್ಲ ಎಂದು ಗರಂ ಆದರು.
ಸಚಿವಾಕಾಂಕ್ಷಿಗಳಲ್ಲಿ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಸಮಾಧಾನಗೊಂಡವರನ್ನ ಸಮಾಧಾನ ಪಡಿಸುವಂತಹ ಕೆಲಸ ನಡೆದಿದೆ. ರಾಜ್ಯದಲ್ಲಿ ಬಿಜೆಪಿ ಉತ್ತಮ ಆಡಳಿತವನ್ನ ನೀಡಲಿದೆ. ಸರ್ಕಾರ ನಾಲ್ಕು ವರ್ಷ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಉಮೆಶ್ ಕತ್ತಿ ಜೆಡಿಎಸ್‍ನವರ ಸಂಪರ್ಕದಲ್ಲಿದ್ದಾರೆ ಎಂಬ ವಿಚಾರದ ಕುರಿತು ಮಾತನಾಡಿದ ಜೋಷಿ, ಅದೆಲ್ಲ ಶುದ್ಧ ಸುಳ್ಳು ವಿಚಾರ. ಜೆಡಿಎಸ್ ಹಾಗೂ ಕಾಂಗ್ರೆಸ್ ಮುಳುಗುತ್ತಿರುವ ಹಡಗುಗಳು. ಮುಳುಗುತ್ತಿರುವ ಹಡಗಿನಲ್ಲಿ ಯಾರೂ ಪ್ರಾಣ ಕಳೆದುಕೊಳ್ಳುವುದಿಲ್ಲ. ನೆರೆ ಪರಿಹಾರಕ್ಕೆ ಈಗಾಗಲೇ ಕೇಂದ್ರದಿಂದ ಹಣ ಬಿಡುಗಡೆಯಾಗಿದೆ. ಇನ್ನೂ ಹೆಚ್ಚಿನ ಹಣ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಮಹೇಶ್ ಕುಮಟಳ್ಳಿ ಅವರನ್ನೂ ನಾವು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ನಡೆಸಲಿದ್ದೇವೆ. ಸಚಿವ ಸಂಪುಟ ವಿಸ್ತರಣೆಯಾಗಿದೆ ಆದಷ್ಟು ಬೇಗ ಖಾತೆ ಹಂಚಿಕೆಯಾಗುತ್ತದೆ. ಅನರ್ಹ ಶಾಕಸರೆಲ್ಲರೂ ಅರ್ಹ ಶಾಸಕರಾಗುತ್ತಾರೆ. ಸುಪ್ರೀಂಕೋರ್ಟಿನಲ್ಲಿ ಅವರಿಗೆ ಜಯ ಸಿಗುತ್ತದೆ ಎಂದರು.

Leave a Reply