ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ಹೈಕಮಾಂಡ್‍ಗೆ ಬಿಟ್ಟ ವಿಚಾರ: ಪ್ರಹ್ಲಾದ್ ಜೋಶಿ

– ಕಾಂಗ್ರೆಸ್, ಜೆಡಿಎಸ್ ವಂಶಾಡಳಿತಕ್ಕೆ ಒಳಪಟ್ಟ ಪಕ್ಷಗಳು

ಹುಬ್ಬಳ್ಳಿ: ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡುವ ವಿಚಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಹೈ ಕಮಾಂಡ್‍ಗೆ ಬಿಟ್ಟಿದ್ದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಬಿಜೆಪಿ ಯಾವುದೇ ರೀತಿ ಕುದುರೆ ವ್ಯಾಪಾರ ಮಾಡಿಲ್ಲ. ಮೈತ್ರಿ ಸರ್ಕಾರದ ಅಸಮಾಧಾನದಿಂದ ಅತೃಪ್ತರು ಹೊರಗಡೆ ಬಂದಿದ್ದಾರೆ. ಅಷ್ಟೇ ಅಲ್ಲದೆ ಕಾಂಗ್ರೆಸ್-ಜೆಡಿಎಸ್ ವಂಶಾಡಳಿತಕ್ಕೆ ಒಳಪಟ್ಟ ಪಕ್ಷಗಳು. ಅಲ್ಲಿನ ಕೆಲ ನಾಯಕರಿಗೆ ಕುಟುಂಬದ ಹಿತವೇ ಮುಖ್ಯವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಆ ಪಕ್ಷಗಳ ಬಲ ಮತ್ತಷ್ಟು ಕುಗ್ಗಲಿದೆ ಎಂದು ವಾಗ್ದಾಳಿ ನಡೆಸಿದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಆಶೀರ್ವಾದ ಮಾಡಿದ್ದರು. ಆದರೆ ಜೆಡಿಎಸ್-ಕಾಂಗ್ರೆಸ್ ನಾಯಕರು ಜನಾದೇಶವನ್ನು ಧಿಕ್ಕರಿಸಿದ ಆಡಳಿತ ನಡೆಸಿದರು. ಈಗ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಆಡಳಿತಕ್ಕೆ ಬಂದಿದೆ. ಈ ಮೂಲಕ ಜನಾದೇಶಕ್ಕೆ ಗೌರವ ಸಿಕ್ಕಿದೆ ಎಂದು ತಿಳಿಸಿದರು.

ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ. ಅತೃಪ್ತ ಶಾಸಕರು ಯಾವುದೇ ಕಾರಣಕ್ಕೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಬೆಂಬಲ ನೀಡುವುದಿಲ್ಲ ಅಂತ ಹೇಳಿದ್ದಾರೆ. ಹೀಗಾಗಿ ನಮಗೆ ಸಂಖ್ಯಾಬಲ ಇರುವುದರಿಂದ ಗೆಲ್ಲುತ್ತೇವೆ. ಸಚಿವ ಸ್ಥಾನ ಹಾಗೂ ಉಪಮುಖ್ಯಮಂತ್ರಿ ಆಯ್ಕೆಯ ವಿಚಾರ ಹೈಕಮಾಂಡ್‍ಗೆ ಬಿಟ್ಟಿದ್ದು. ಮುಂದಿನ ಕೆಲವೇ ದಿನಗಳಲ್ಲಿ ಸಚಿವ ಸಂಪುಟ ರಚನೆ ಮಾಡಲಾಗುತ್ತದೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *