ಸತ್ಯ ಹೊರ ಬರುತ್ತೆ, ಜಾರ್ಜ್‍ಗೆ ಜೈಲೇಗತಿ: ಜಾವಡೇಕರ್

ಬೀದರ್: ಡಿವೈಎಸ್‍ಪಿ ಗಣಪತಿ ಕೇಸ್ ನಲ್ಲಿ ಈ ಬಾರಿ ಸಚಿವ ಕೆಜೆ ಜಾರ್ಜ್‍ರನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ, ಸತ್ಯ ಹೊರ ಬರುತ್ತೆ. ಕೆಜೆ ಜಾರ್ಜ್‍ಗೆ ಜೈಲೇಗತಿ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ಮಾಣಿಕ್‍ನಗರ ಪ್ರವಾಸಿ ಮಂದಿರದಲ್ಲಿ ಕೋರ ಕಮೀಟಿ ಸಭೆ ಮಾಡಿ ನಂತರ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಸಂಸದ ಭಗವತ್ ಖೂಬಾ, ಔರಾದ್ ಶಾಸಕ ಪ್ರಭು ಚವ್ಹಾಣ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಾವಡೇಕರ್ ಪಾಪ ಮಾಡೋದು ರಾಜಕಾರಣಿಗಳು, ಸಾಯೋದು ಅಧಿಕಾರಿ. ರಾಜಕಾರಣಿಗಳು ಏನೇ ಮಾಡಿದರು ಕ್ಲೀನ್ ಚಿಟ್ ನೀಡಿ ಪ್ರಕರಣವನ್ನು ಮುಚ್ಚಿ ಹಾಕಲಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಅಹಿಂದ ಹೆಸರನ್ನು ಹೇಳುತ್ತಾರೆ ಆದರೆ, ಅಹಿಂದಕ್ಕಾಗಿ ನೀವು ಏನು ಮಾಡಿದ್ದೀರಿ? ಜನತೆಗಾಗಿ ಏನು ಮಾಡಿದ್ದೀರಿ? ಕರ್ನಾಟಕ ರಾಜ್ಯಕ್ಕಾಗಿ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದರು. ನಿಮ್ಮ ಸರ್ಕಾರದಲ್ಲಿ ನೀವು ಏನೂ ಮಾಡಿಲ್ಲ. ಬರೀ ಭ್ರಷ್ಟಾಚಾರ ಮತ್ತು ಹಣ ವರ್ಗಾವಣೆಯಾದ ಡೈರಿಗಳು ಸಿಕ್ಕಿವೆ. ಒಂದು ರೂಪಾಯಿಗೆ ಒಂದು ಕೆಜಿ ಅಕ್ಕಿ ನೀಡುವ ಅನ್ನಭಾಗ್ಯವಲ್ಲ ನಮ್ಮದು ಮೋದಿಭಾಗ್ಯ ಎಂದು ಕೇಂದ್ರ ಸರ್ಕಾರವನ್ನು ಹೊಗಳಿದರು.

ಭಾರತದಲ್ಲಿ ಕಾಂಗ್ರೆಸ್ ಮುಕ್ತವಾಗುತ್ತಿದ್ದು ಜೀವನ ಉದ್ದಕ್ಕೂ ವಿದೇಶ ಪ್ರವಾಸ ಮಾಡಿಕೊಂಡೇ ಇರಲಿ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿ ಬಗ್ಗೆ ವ್ಯಂಗವಾಡಿದರು. ನಂತರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಗುತ್ತಿಗೆದಾರ ಮಂತ್ರಿ ಎಂದು ಪ್ರಸಿದ್ಧಿ ಪಡೆದಿದ್ದು, ತಾವೇ ಸ್ವತಃ ಗುತ್ತಿಗೆ ತೆಗೆದುಕೊಳ್ಳುತ್ತಾರೆ ಎಂದು ಜಾವಡೇಕರ್ ಆರೋಪ ಮಾಡಿದರು.

 

Comments

Leave a Reply

Your email address will not be published. Required fields are marked *