ಬೆಂಗಳೂರಿಗೆ ಕುರುಬೂರು ಶಾಂತಕುಮಾರ್ ಶಿಫ್ಟ್ ಮಾಡಲು ಸೋಮಣ್ಣ ಪ್ರಯತ್ನ

ನವದೆಹಲಿ: ರೈತ ಮುಖಂಡ ಕುರುಬೂರು ಶಾಂತಕುಮಾರ್ (Kuruburu Shanthakumar) ಅವರನ್ನು ಬೆಂಗಳೂರಿಗೆ (Bengaluru) ಶಿಫ್ಟ್ ಮಾಡಲು ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ಸೋಮಣ್ಣ (V Somanna) ಪ್ರಯತ್ನ ನಡೆಸುತ್ತಿದ್ದಾರೆ.

ಅಪಘಾತದಲ್ಲಿ (Accident) ಬೆನ್ನುಮೂಳೆಗೆ ತೀವ್ರಗಾಯವಾಗಿದ್ದು ಕುರುಬೂರು ಶಾಂತಕುಮಾರ್ ಅವರು ಪಂಜಾಬ್‌ನ ಪಟಿಯಾಲ ರಾಜೇಂದ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಂಗಳೂರಿಗೆ ಏರ್‌ಲಿಫ್ಟ್‌ (Airlift) ಮಾಡುವ ಸಂಬಂಧ ಪಟಿಯಾಲ ಜಿಲ್ಲೆಯ ಡಿಸಿ ಜೊತೆ ಸಚಿವ ಸೋಮಣ್ಣ ಮಾತನಾಡಿದ್ದಾರೆ. ಬೆಂಗಳೂರಿನಲ್ಲೇ ಚಿಕಿತ್ಸೆ ಕೊಡಿಸುವ ಸಂಬಂಧ ಶಾಂತಕುಮಾರ್ ಜೊತೆ ಮೂರು ಬಾರಿ ಸೋಮಣ್ಣ ಮಾತನಾಡಿದ್ದಾರೆ.  ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಹಿಂದೂಗಳ ಮನೆ ಮೇಲೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ

ಕರ್ನಾಟಕದ ರೈತ ಮುಖಂಡನಾಗಿ ಹಲವು ರೈತ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಕಿಸಾನ್ ಮೋರ್ಚಾದ ಸಂಚಾಲಕ ಕುರುಬೂರು ಶಾಂತಕುಮಾರ್ ಪಂಜಾಬ್‌ನಲ್ಲಿ ಆಯೋಜನೆಗೊಂಡಿದ್ದ ರೈತ ಪ್ರತಿಭಟನೆಯಲ್ಲಿ ಭಾಗಿಯಾಗಲು ದೆಹಲಿಗೆ ತೆರಳಿದ್ದರು.

ದೆಹಲಿಯಿಂದ ಪಂಜಾಬ್ ಕಡೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಎಸ್ಕಾರ್ಟ್ ವಾಹನ ಜೊತೆ ತೆರಳುತ್ತಿದ್ದ ವೇಳೆ ಮುಂದಿನ ವಾಹನ ಅಪಘಾತಕ್ಕೀಡಾಗಿದೆ. ಹೀಗಾಗಿ ಶಾಂತಕುಮಾರ್ ಪ್ರಯಾಣಿಸುತ್ತಿದ್ದ ಕಾರು ಚಾಲಕ ತಕ್ಷಣ ಬ್ರೇಕ್ ಹಾಕಿದ್ದಾನೆ. ಪರಿಣಾಮ ಹಿಂದಿನಿಂದ ಬರುತ್ತಿದ್ದ 5ಕ್ಕೂ ಹೆಚ್ಚು ಕಾರುಗಳು ಏಕಕಾಲಕ್ಕೆ ಸರಣಿ ಅಪಘಾತಕ್ಕೀಡಾಗಿತ್ತು.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ಕಳೆದ ಒಂದು ವರ್ಷದಿಂದ ಕನೋಲಿ ಬಾರ್ಡರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶಾಂತಕುಮಾರ್ ಅವರು ಶುಕ್ರವಾರ ಸಭೆಗೆ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ಈ ಅಪಘಾತ ಸಂಭವಿಸಿತ್ತು.