ಜೆಡಿಎಸ್‌ ರಾಜ್ಯಾಧ್ಯಕ್ಷರ ಆಯ್ಕೆಗೆ ಮುಹೂರ್ತ ಫಿಕ್ಸ್‌ – ಹೆಚ್‌ಡಿಕೆ ಹೇಳಿದ್ದೇನು?

ಬೆಂಗಳೂರು: ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷರ ಆಯ್ಕೆಗೆ ಮುಹೂರ್ತ ಫಿಕ್ಸ್‌ ಆಗಿದೆ. ಈ ಕುರಿತು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.

ಜೆ.ಪಿ.ಭವನದಲ್ಲಿ ಸಭೆ ಬಳಿಕ ಮಾತನಾಡಿದ ಅವರು, ಪಕ್ಷದ ಸಾಂಸ್ಥಿಕ ಚುನಾವಣೆ, ಸದಸ್ಯತ್ಯ ನೋಂದಣಿ ಮಾಡಬೇಕೆಂಬ ತೀರ್ಮಾನ ಆಯ್ತು. ಮುಂದಿನ ಏಪ್ರಿಲ್ ಒಳಗೆ ರಾಜ್ಯದ ಘಟಕದ ಅಧ್ಯಕ್ಷ ಸ್ಥಾನವನ್ನು ಚುನಾವಣೆ ಮೂಲಕ ಆಯ್ಕೆ ಮಾಡುವ ತೀರ್ಮಾನ ಆಗಿದೆ. ಪಕ್ಷದ ಸಂಘಟನೆ ಬಗ್ಗೆ ಪಕ್ಷದ ನಾಯಕರಿಗೆ ಕಠಿಣವಾಗಿಯೇ ಹೇಳಿದ್ದೇನೆ. ಯಾರು ಪ್ರಾಮಾಣಿಕವಾಗಿ ಪಕ್ಷದ ಸಂಘಟನೆಗೆ ದುಡೀತಾರೋ ಅಂಥವರಿಗೆ ಆದ್ಯತೆ ಕೊಡ್ತೀವಿ ಅಂದಿದ್ದೇವೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರ ಹೆಸರು ಆಯ್ಕೆ ಆಗಬೇಕು ಅಂತ ಇವತ್ತಿನ ಸಭೆಯಲ್ಲಿ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ವಾರದಲ್ಲಿ ನಾಲ್ಕು ದಿನ ದೆಹಲಿಗೆ ಸಚಿವಾಲಯದಲ್ಲಿ ಇಲಾಖೆ ಸಭೆ, ಇಲಾಖೆ ಕೆಲಸ ಮಾಡ್ತೇನೆ. ವಾರದಲ್ಲಿ ಒಂದು ದಿನ ಅಥವಾ ಎರಡು ದಿನ ದೇಶದ ಸ್ಟೀಲ್ ಇಂಡಸ್ಟ್ರಿಗಳಿಗೆ ಖುದ್ದು ಭೇಟಿ ಮಾಡ್ತೇನೆ. ಸ್ಟೀಲ್ ಇಂಡಸ್ಟ್ರಿಗಳು ಲಾಭತರಲ್ಲ ಅನ್ನುವ ಭಾವನೆ ಏನಿದೆ, ಅದನ್ನು ಹೋಗಲಾಡಿಸಬೇಕು. ಇನ್ನು ವಾರದಲ್ಲಿ ಒಂದೆರಡು ದಿನ ಪಕ್ಷದ ಸಂಘಟನೆ ಸಭೆ, ಪ್ರವಾಸ, ಮಂಡ್ಯ ಭೇಟಿ ಮಾಡಬೇಕು ಅಂತ ಟೈಮ್‌ಟೇಬಲ್ ನಾನೇ ರೆಡಿ‌ ಮಾಡ್ಕೊಂಡಿದ್ದೇನೆ ಎಂದರು.

ಕಾಂಗ್ರೆಸ್ ನಮ್ಮ ಶಾಸಕರನ್ನು ಆಪರೇಷನ್ ಮಾಡ್ತಿದೆ. ‘ಜೆಡಿಎಸ್‌ನಲ್ಲಿ ಗಢಗಢ, ಸಂಕ್ರಾಂತಿ ನಂತರ ಜೆಡಿಎಸ್ ಇರೋದೇ ಇಲ್ಲ…’ ಹೀಗೆ ಯಾರಾದ್ರೂ ನಿಮಗೆ ಹೇಳಿದರೆ ನಂಬಬೇಡಿ. ಮೊದಲು ಕಾಂಗ್ರೆಸ್‌ನವರು ಅವರ ಪಕ್ಷದ ಬಗ್ಗೆ ನೋಡಿಕೊಳ್ಳಲಿ. ದೆಹಲಿಯಲ್ಲಿ ಏನಾಗಿದೆ? ಇಂಡಿ ಕೂಟದ ಒಳಗೆ ಏನಾಗ್ತಿದೆ ನೋಡಿಕೊಳ್ಳಿ. ನಿಮ್ಮ ಪಕ್ಷದ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ಎಂಬಿ ಪಾಟೀಲರೇ ಅದನ್ನು ಮೊದಲು ನೋಡಿ, ಬೇರೆಯವರಿಗೂ ಇದು ಅನ್ವಯ. ನಮಗೆ, ನಮ್ಮ ಕುಟುಂಬಕ್ಕೆ ಸೋಲು-ಗೆಲುವು ಹೊಸದೇನಲ್ಲ. ಸೋತಾಗ ಕುಗ್ಗಿಲ್ಲ, ಗೆದ್ದಾಗ ಹಿಗ್ಗಿಲ್ಲ ಎಂದು ತಿರುಗೇಟು ನೀಡಿದರು.

ಹಸುಗಳ ಕೆಚ್ಚಲು ಕೊಯ್ದ ಪ್ರಕರಣಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿದ ಹೆಚ್‌ಡಿಕೆ, ಇದು ರಾಕ್ಷಸೀ ಕೃತ್ಯ. ಕಾಂಗ್ರೆಸ್ ಆಡಳಿತ ಇವತ್ತು ಎಲ್ಲಿಗೆ ಬಂದಿದೆ? ಇಲ್ಲಿಯವರೆಗೆ ಮನುಷ್ಯರನ್ನು ಕೊಲ್ಲೋದನ್ನು ನೋಡಿದ್ದೀವಿ. ಕಾಮಧೇನು, ಮಹಾಲಕ್ಷ್ಮಿ ಹಾಗೆ. ಅಂಥ ಕಾಮದೇನು ಕೆಚ್ಚಲು ಕೊಯ್ಯುವ ಹೇಯ ಕೃತ್ಯ ಮಾಡಿರುವ ಆ ಕೆಟ್ಟ ಮನಸ್ಥಿತಿಗೆ ಏನನ್ನಬೇಕು. ಪರಮೇಶ್ವರ್ ಅವರು ಈ ನಿಟ್ಟಿನಲ್ಲಿ ಕಠಿಣ ಕ್ರಮ ತಗೋಬೇಕು. ಅವರ ಬೆಣ್ಣೆ ಮಾತು ನಡೆಯಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಡಿನ್ನರ್ ಮೀಟಿಂಗ್ ನಿಲ್ಸಿ, ಆಡಳಿತ ಸರಿ ಮಾಡೋದನ್ನು ನೋಡಿ. ಇಂಥ ವಿಚಾರಗಳಲ್ಲಿ ಕ್ರಮ ತಗೊಳ್ಳಿ. ಇವರ ಸರ್ಕಾರದ ಅವಧಿಯಲ್ಲಿ ರಾಕ್ಷಸೀ ಕೃತ್ಯ ಮೆರೆಯುವ ಇಂಥ ಜನರನ್ನ ಸೃಷ್ಟಿ ಮಾಡ್ತಿದ್ದಾರೆ. ಡಿನ್ನರ್ ಪಾರ್ಟಿ ಎಲ್ಲಿಗೂ ಓಡಿ ಹೋಗಲ್ಲ. ಎಸ್‌‌ಸಿ-ಎಸ್‌ಟಿ ಮಕ್ಕಳಿಗೆ ಸ್ಕಾಲರ್‌ಶಿಪ್‌ ಕೊಡೋ ಚರ್ಚೆಗೆ ಡಿನ್ನರ್ ಪಾರ್ಟಿ ಅಂತೆ, ಕ್ಯಾಬಿನೆಟ್ ಸಭೆ ಯಾಕ್ ಮಾಡ್ತೀರಿ? ಸರ್ಕಾರದ ಲೋಪಗಳನ್ನ ಡಿನ್ನರ್ ಪಾರ್ಟಿಯಲ್ಲಿ ಚರ್ಚೆ ಮಾಡ್ತೀರಾ? ಹೊಸ ಸಂಪ್ರದಾಯ ತರ್ತಿದೀರಾ? ಕ್ಯಾಬೆನೆಟ್ ಸಭೆ ಏನಕ್ಕೆ ಮತ್ತೆ ಎಂದು ಪ್ರಶ್ನಿಸಿದರು.