‘ಎಲ್ಲಿದ್ದೀಯಪ್ಪಾ ನಿಖಿಲ್’, ಹೋಗು ನಿನ್ನ ತಂದೆ ಹತ್ರ: ಅನಂತ್‍ಕುಮಾರ್ ಹೆಗ್ಡೆ ವ್ಯಂಗ್ಯ

ಬೆಂಗಳೂರು: ರಾಜ್ಯದಲ್ಲಿ ಐಟಿ ಅಧಿಕಾರಿಗಳು ನಡೆಸಿರುವ ದಾಳಿಯ ಬಗ್ಗೆ ಕಿಡಿಕಾರಿರುವ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಡೆ ಕಟು ಟೀಕೆ ಮಾಡಿ ಟ್ವೀಟ್ ಮಾಡಿದ್ದಾರೆ.

ಸಿಎಂ ಕುಮಾರಸ್ವಾಮಿ ಅವರು ಇಂದು ತಮ್ಮ ಆಪ್ತರ ಮೇಲೆ ದಾಳಿ ನಡೆದಿದೆ ಎಂಬ ಹೇಳಿಕೆಯನ್ನ ನೋಟ್ ಮಾಡಿಕೊಳ್ಳುವಂತೆ ರಾಜ್ಯ ಬಿಜೆಪಿ ಮಾಡಿರುವ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಅನಂತ್‍ಕುಮಾರ್ ಹೆಗ್ಡೆ ಟೀಕೆ ಮಾಡಿದ್ದಾರೆ.

ಟ್ವಿಟ್ಟಿನಲ್ಲೇನಿದೆ?
ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕ್ಲರ್ಕ್ ಹುದ್ದೆ ಆಲಂಕರಿಸಲು ಸೂಕ್ತ ಅಲ್ಲ. ಅವರಿಗೆ ಬೇರೆ ಕಡೆ ಆರೈಕೆಯ ಅಗತ್ಯವಿದೆ. ಅವರು ರಾಜಕೀಯ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದಾರೆ. ಇದು ಭ್ರಮೆಯನ್ನು ಸೃಷ್ಟಿಸುತ್ತೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಸಾಕಷ್ಟು ವೈರಲ್ ಆಗಿದ್ದ ‘ಎಲ್ಲಿದ್ದೀಯಪ್ಪಾ ನಿಖಿಲ್’ ಎಂಬ ಸಾಲು ಬಳಕೆ ಮಾಡಿ, ‘ಎಲ್ಲಿದ್ದೀಯಪ್ಪಾ ನಿಖಿಲ್’, ಹೋಗು ನಿನ್ನ ತಂದೆ ಹತ್ತಿರ ಎಂದು ಅನಂತ್‍ಕುಮಾರ್ ಹೆಗ್ಡೆ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್, ಜೆಡಿಎಸ್ ಪ್ರತಿಭಟನೆ: ಚುನಾವಣೆಯ ವೇಳೆಯಲ್ಲಿ ಉದ್ದೇಶ ಪೂರ್ವಕವಾಗಿ ಕೇಂದ್ರ ಸರ್ಕಾರ ಐಟಿ ಅಧಿಕಾರಿಗಳಿಂದ ದಾಳಿ ನಡೆಸಿದೆ ಎಂದು ರಾಜ್ಯ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ನಗರದ ಐಟಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರು, ಐಟಿ ದಾಳಿಯ ಬಗ್ಗೆ ನಮ್ಮ ವಿರೋಧವಿಲ್ಲ. ಕೆಲವೇ ಕೆಲವು ಪಕ್ಷದ ಮುಖಂಡರು, ಕಾರ್ಯಕರ್ತರ ಮನೆಯ ಮೇಲೆ ದಾಳಿ ಮಾಡುತ್ತಿರುವುದು ಸರಿಯಲ್ಲ. ವಿರೋಧ ಪಕ್ಷದ ಕಾರ್ಯಕರ್ತರಲ್ಲಿ ಭಯ ಮೂಡಿಸಲು ಬಿಜೆಪಿಯವರು ಇಂತಹ ತಂತ್ರ ಅನುಸರಿಸುತ್ತಿದ್ದಾರೆ ಎಂದು ದೂರಿದ್ದರು.

ಸಾಮಾನ್ಯವಾಗಿ ಐಟಿ ಅಧಿಕಾರಿಗಳು ಆಯಾ ರಾಜ್ಯಗಳ ಪೊಲೀಸರ ನೆರವು ಪಡೆದು ದಾಳಿ ಮಾಡುತ್ತಾರೆ. ಆದರೆ ಇಂದು ಸಿಆರ್‍ಪಿಎಫ್ ಯೋಧರ ನೆರವು ಪಡೆದು ದಾಳಿ ಮಾಡಿದ್ದಾರೆ. ಯಾವ ಉದ್ದೇಶಕ್ಕಾಗಿ ಹೀಗೆ ಮಾಡಿದ್ದು ಎನ್ನುವುದಕ್ಕೆ ಉತ್ತರ ನೀಡಬೇಕು ಎಂದು ಸಿಎಂ ಆಗ್ರಹಿಸಿದ್ದರು. ಈ ವೇಳ ಡಿಸಿಎಂ ಪರಮೇಶ್ವರ್ ಸೇರಿದಂತೆ ಹಲವು ಕೈ-ದಳ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

 

Comments

Leave a Reply

Your email address will not be published. Required fields are marked *