ತ್ರಿವಳಿ ತಲಾಖ್ ಕರಡು ಮಸೂದೆ ಸಿದ್ಧ: ಶಿಕ್ಷೆ ಏನು ಗೊತ್ತಾ?

ನವದೆಹಲಿ: ಮುಸ್ಲಿಮ್ ಸಮುದಾಯದಲ್ಲಿ ತ್ರಿವಳಿ ತಲಾಖ್ ಹೇಳಿ ಪತ್ನಿಗೆ ವಿಚ್ಛೇದನ ನೀಡಿದರೆ ಪತಿಗೆ ಮೂರು ವರ್ಷ ಶಿಕ್ಷೆ ನೀಡುವ ಕಾನೂನು ತರಲು ರೂಪಿಸಲಾಗಿರುವ ಮಸೂದೆಗೆ ಕೇಂದ್ರದ ಕ್ಯಾಬಿನೆಟ್ ಶುಕ್ರವಾರ ಒಪ್ಪಿಗೆ ನೀಡಿದೆ.

ಇದೇ ಆಗಸ್ಟ್ ನಲ್ಲಿ ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ನಿಷೇಧಿಸಿ ಕಾನೂನು ರೂಪಿಸುವಂತೆ ಕೇಂದ್ರಕ್ಕೆ ಆದೇಶಿಸಿತ್ತು. ಈ ಆದೇಶದ ಅನ್ವಯ ಕೇಂದ್ರ ಸರ್ಕಾರ ಮುಸ್ಲಿಮ್ ಮಹಿಳೆಯರ ಮದುವೆ, ಹಕ್ಕುಗಳ ರಕ್ಷಣೆಯ ಕರಡು ಮಸೂದೆ 2017ನ್ನು ಸಿದ್ದಪಡಿಸಿದ್ದು, ಈ ಚಳಿಗಾಲದ ಆಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ.

ಕರಡು ಮಸೂದೆಯಲ್ಲಿ ತ್ರಿವಳಿ ತಲಾಖ್ ನೀಡಿದರೆ ಆ ವ್ಯಕ್ತಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬೇಕೆಂಬ ಅಂಶವಿದೆ. ತ್ರಿವಳಿ ತಲಾಖ್ ಅಥವಾ ತಲಾಕ್ ಇ ಬಿದ್ದತ್ ಅನ್ನು ಕಾಗ್ನಿಸೆಬಲ್ ಅಪರಾಧ ಎಂದು ಪರಿಗಣಿಸಬೇಕು. ಅಷ್ಟೇ ಅಲ್ಲದೇ ಜಾಮೀನು ನೀಡಬಾರದು. ಅನ್ಯಾಯಕ್ಕೆ ಒಳಗಾದ ಮಹಿಳೆಗೆ ಪರಿಹಾರ ನೀಡಬೇಕು ಎನ್ನುವ ಅಂಶವನ್ನು ಸೇರಿಸಲಾಗಿದೆ.

ಕರುಡು ಮಸೂದೆಯ ಪ್ರಕಾರ ಬಾಯಿ ಮಾತು, ಬರವಣಿಗೆ ಅಥವಾ ಯಾವುದೇ ಎಲೆಕ್ಟ್ರಾನಿಕ್ ಅಂದರೆ ಇಮೇಲ್, ಎಸ್‍ಎಂಎಸ್, ವಾಟ್ಸಪ್ ಮೂಲಕ ತಲಾಖ್ ಹೇಳಿದರೆ ಅದು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುತ್ತದೆ.

ತ್ರಿವಳಿ ತಲಾಖ್ ಅಸಂವಿಧಾನಿಕ ಎಂದು ಹೇಳಿ ಸುಪ್ರೀಂ ಕೋರ್ಟ್ ಸಂಪೂರ್ಣ ರದ್ದುಗೊಳಿಸಿ ತೀರ್ಪು ನೀಡಿದ ಬಳಿಕವೂ ಮುಸ್ಲಿಮ್ ಸಮುದಾಯದಲ್ಲಿ ತ್ರಿವಳಿ ತಲಾಖ್ ನೀಡಿದ ಪ್ರಕರಣಗಳು ಬೆಳಕಿಗೆ ಬಂದಿತ್ತು. ಕೋರ್ಟ್ ಆದೇಶದ ಅನ್ವಯ ಕಾನೂನು ರೂಪಿಸಲು ಕೇಂದ್ರ ಸರ್ಕಾರ ಮಸೂದೆ ಸಿದ್ಧಪಡಿಸಲು ಸಚಿವರ ಸಮಿತಿಯನ್ನು ರಚಿಸಿತ್ತು. ಇಂದು ಸಚಿವರ ಸಮಿತಿ ಸಿದ್ಧ ಪಡಿಸಿದ ಕರಡು ಮಸೂದೆಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆ ಒಪ್ಪಿಗೆ ನೀಡಿದೆ.

 

Comments

Leave a Reply

Your email address will not be published. Required fields are marked *