ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ – 3 ಕಾರಣಗಳಿಂದಾಗಿ ರಾಜ್ಯಪಾಲರಿಂದ ಶಿಫಾರಸು

ನವದೆಹಲಿ: ಮಹಾರಾಷ್ಟ್ರದಲ್ಲಿ ಹೈಡ್ರಾಮಾ ನಡೆಯುತ್ತಿದ್ದು ರಾಷ್ಟ್ರಪತಿ ಆಡಳಿತಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಸೋಮವಾರ ರಾತ್ರಿ ಎನ್‍ಸಿಪಿಗೆ ಸರ್ಕಾರ ರಚಿಸುವಂತೆ ಆಹ್ವಾನ ನೀಡಿ ರಾತ್ರಿ 8:30ರ ವರೆಗೆ ಗಡುವು ನೀಡಿದ್ದರು. ಈ ಗಡುವು ಮುಗಿಯುವದರ ಒಳಗೆ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದಾರೆ. ರಾಜ್ಯಪಾಲರ ಶಿಫಾರಸು ಬರುತ್ತಿದ್ದಂತೆ ಮೋದಿ ನೇತೃತ್ವದ ನಡೆದ ಕ್ಯಾಬಿನೆಟ್ ಸಭೆ ತುರ್ತು ಒಪ್ಪಿಗೆ ನೀಡಿದ್ದು ರಾಷ್ಟ್ರಪತಿ ಆಡಳಿತ ಜಾರಿಗೆ ಬಂದಿದೆ.

ರಾಷ್ಟ್ರಪತಿ ಆಡಳಿತಕ್ಕೆ ಶಿವಸೇನೆ ವಿರೋಧ ವ್ಯಕ್ತಪಡಿಸಿದ್ದು ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ. ಆದರೆ ನಿಗದಿತ ಸಮಯದ ಮುಗಿಯುವುದರ ಒಳಗಡೆ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದಕ್ಕೆ ಶಿವಸೇನೆ ನಾಯಕಿ ಪ್ರಿಯಾಂಕ ಚತುರ್ವೇದಿ ರಾಜ್ಯಪಾಲರ ವಿರುದ್ಧ ಕಿಡಿಕಾರಿದ್ದಾರೆ.

ರಾಷ್ಟ್ರಪತಿ ಆಡಳಿತ ಜಾರಿ ಯಾಕೆ?
ಚುನಾವಣಾ ಫಲಿತಾಂಶ ಬಂದು 19 ದಿನವಾದರೂ ಇಲ್ಲಿಯವರೆಗೆ ಯಾರೂ ಸರ್ಕಾರ ರಚನೆ ಮಾಡಿಲ್ಲ. ಇದು ಮೊದಲ ಕಾರಣವಾದರೆ ಎರಡನೆಯದು ಎಲ್ಲ ಪಕ್ಷಗಳಿಗೆ ಸರ್ಕಾರ ರಚಿಸಲು 24 ಗಂಟೆಗಳ ಸಮಯವನ್ನು ಮಾತ್ರ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ಸಮಯವನ್ನು ಮುಂದೂಡಲು ಸಾಧ್ಯವಿಲ್ಲ. ಎನ್‍ಸಿಪಿಗೆ ಇಂದು ರಾತ್ರಿ 8:30ರವರೆಗೆ ಸಮಯವನ್ನು ರಾಜ್ಯಪಾಲರು ನೀಡಿದ್ದರು. ಆದರೆ ಎನ್‍ಸಿಪಿ ಈ ಅವಧಿಯನ್ನು ಮೂರು ದಿನಕ್ಕೆ ವಿಸ್ತರಿಸಬೇಕೆಂದು ಕೇಳಿಕೊಂಡಿತ್ತು. ರಾಜ್ಯಪಾಲರು ಮೂರು ದಿನಗಳ ಕಾಲ ಸಮಯ ಮುಂದೂಡಲು ಸಾಧ್ಯವಿಲ್ಲ ಎಂದು ಹೇಳಿ ಕೇಂದ್ರ ಸರ್ಕಾರ ರಾಷ್ಟ್ರಪತಿ ಆಡಳಿತ ಜಾರಿ ಮಾಡಲು ಶಿಫಾರಸು ಮಾಡಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ.

ಶಿವಸೇನೆ ಜೊತೆ ಸರ್ಕಾರ ರಚಿಸುವ ಸಂಬಂಧ ಕಾಂಗ್ರೆಸ್ ಮತ್ತು ಎನ್‍ಸಿಪಿ ನಿರ್ಧಾರ ಅಂತಿಮವಾಗಿಲ್ಲ. ಎನ್‍ಸಿಪಿ ಮೈತ್ರಿಗೆ ಸಿದ್ಧ ಎಂದಿದ್ದರೂ ಕಾಂಗ್ರೆಸ್ ಒಪ್ಪಿಗೆ ನೀಡದ ಪರಿಣಾಮ ಸರ್ಕಾರ ರಚನೆಯ ಬಗ್ಗೆ ಅನುಮಾನ ಎದ್ದಿತ್ತು.

ಇಂದು ಮಹಾ ಕಾಂಗ್ರೆಸ್ ನಾಯಕರ ಜೊತೆ ದೆಹಲಿಯ ನಾಯಕರು ಸಭೆ ನಡೆಸುತ್ತಿದ್ದು ಇನ್ನೂ ಅಧಿಕೃತವಾಗಿ ಮೈತ್ರಿಗೆ ಒಪ್ಪಿಗೆ ಪ್ರಕಟಿಸಿಲ್ಲ. ಹೀಗಾಗಿ ವಿಧಾನಸಭಾ ಅವಧಿ ಮುಕ್ತಾಯಗೊಂಡಿದ್ದರೂ ಯಾವುದೇ ಸ್ಥಿರ ಸರ್ಕಾರ ರಚನೆಯಾಗದ ಪರಿಣಾಮ ರಾಜ್ಯಪಾಲರು ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದಾರೆ.

ಎನ್‍ಸಿಪಿ ನಾಯಕ ನವಾಬ್ ಮಲ್ಲಿಕ್ ಪ್ರತಿಕ್ರಿಯೆ ಇಂದು ನಾವು ಸರ್ಕಾರ ರಚನೆ ಸಂಬಂಧ ಸಭೆ ನಡೆಸಿದ್ದೇವೆ. ರಾಜ್ಯಪಾಲರು ನಮಗೆ ಇಂದು ರಾತ್ರಿ 8:30ರವರೆಗೆ ಸಮಯ ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಅಜಾದ್, ಕೆಸಿ ವೇಣುಗೋಪಾಲ್ ಅವರು ಮುಂಬೈನಲ್ಲಿ ಸಂಜೆ 5 ಗಂಟೆಗೆ ಶರದ್ ಪವಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದರು.

Comments

Leave a Reply

Your email address will not be published. Required fields are marked *