ಎರಡನೇ ಬಾರಿ ಕೂಡ ಹೆಣ್ಣು ಮಗು ಜನಿಸಿದ್ದಕ್ಕೆ ರೊಚ್ಚಿಗೆದ್ದು ಪತಿಯನ್ನೇ ಕೊಂದ್ಳು

– ಮೊದಲು ಆತ್ಮಹತ್ಯೆ ಎಂದು ಕೊನೆಗೆ ಸತ್ಯ ಬಾಯ್ಬಿಟ್ಳು

ಮುಂಬೈ: ಎರಡನೇ ಮಗುವೂ ಹೆಣ್ಣಾಗಿದಕ್ಕೆ ಬೇಸತ್ತ ಪತ್ನಿಯೊಬ್ಬಳು ತನ್ನ ಪತಿಯನ್ನೇ ಕೊಲೆ ಮಾಡಿದ ವಿಚಿತ್ರ ಘಟನೆ ಮುಂಬೈನಲ್ಲಿ ನಡೆದಿದೆ. ಮೊದಲು ಕೃತ್ಯವನ್ನು ಮುಚ್ಚಿ ಹಾಕಲು ಪತಿ ಆತ್ಮಹತ್ಯೆ ಮಾಡಿಕೊಂಡನು ಎಂದಿದ್ದ ಪತ್ನಿ, ಪೊಲೀಸರ ವಿಚಾರಣೆ ವೇಳೆ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ.

ಮುಂಬೈನ ನಲಸೋಪರದ ಗಾಲಾ ನಗರದಲ್ಲಿ ಈ ಘಟನೆ ನಡೆದಿದೆ. ಸುನೀಲ್ ಕದಮ್(36) ಮೃತ ದುರ್ದೈವಿ, ಆತನ ಪತ್ನಿ ಪ್ರಣಾಲಿ(33) ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಸುನೀಲ್ ತಂದೆ-ತಾಯಿ, ಇಬ್ಬರು ಮಕ್ಕಳು ಹಾಗೂ ಪತ್ನಿ ಜೊತೆ ವಾಸವಾಗಿದ್ದನು. ಪತ್ನಿಗೆ ಮೊದಲ ಮಗು ಹೆಣ್ಣಾಗಿದ್ದಕ್ಕೇ ಬೇಸರವಾಗಿತ್ತು ಹಾಗೂ ಪತಿ ಪರ ಸ್ತ್ರೀ ಜೊತೆ ಸಂಬಂಧ ಹೊಂದಿದ್ದಾನೆಂದು ಶಂಕಿಸಿ ಇಬ್ಬರ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಆದರೆ ಎರಡನೇ ಮಗು ಕೂಡ ಹೆಣ್ಣಾಗಿದ್ದರಿಂದ ಬೇಸತ್ತ ಪತ್ನಿ ಪತಿಯನ್ನೇ ಕೊಲೆ ಮಾಡಿದ್ದಾಳೆ.

ಬುಧವಾರ ಪತಿ-ಪತ್ನಿ ಮಧ್ಯೆ ಗಲಾಟೆ ನಡೆದಿತ್ತು, ಈ ವೇಳೆ ಮಾತಿಗೆ ಮಾತು ಬೆಳೆದು ಸಿಟ್ಟಿಗೆದ್ದ ಪತ್ನಿ ಅಡುಗೆ ಮನೆಯಿಂದ ಚಾಕು ತಂದು ಪತಿ ಮೇಲೆ 11 ಬಾರಿ ದಾಳಿ ನಡೆಸಿದ್ದಾಳೆ. ನಂತರ ಪತಿ ಕತ್ತು ಸೀಳಿದ್ದಾಳೆ.

ಕೊಲೆ ಮಾಡಿದ ಬಳಿಕ ಲಿವಿಂಗ್ ರೂಮಿನಲ್ಲಿ ಮಲಗಿದ್ದ ಅತ್ತೆ-ಮಾವನಿಗೆ ಸುನೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕಥೆ ಕಟ್ಟಿದ್ದಾಳೆ. ಸತ್ಯಾಂಶ ತಿಳಿಯದ ಅತ್ತೆ- ಮಾವ ಪಾಪ ಸೊಸೆಯ ಮಾತನ್ನೇ ನಂಬಿದ್ದಾರೆ. ವ್ಯಕ್ತಿ ತನ್ನ ಹೊಟ್ಟೆಗೆ, ಕತ್ತಿಗೆ ತಾನಾಗಿಯೇ ಈ ರೀತಿ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಅನುಮಾನ ಮೂಡಿದೆ.

ಈ ಹಿನ್ನೆಲೆ ಪತ್ನಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ, ಮೊದಲು ಪತಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿದ್ದವಳು, ಆಮೇಲೆ ಪತಿಗೆ ಬೇರೊಬ್ಬಳ ಜೊತೆ ಅಕ್ರಮ ಸಂಬಂಧ ಇತ್ತು ಅದ್ದಕ್ಕಾಗಿ ಕೊಲೆ ಮಾಡಿದೆ ಎಂದಿದ್ದಳು. ಬಳಿಕ ಮತ್ತೆ ವಿಚಾರಣೆ ನಡೆಸಿದಾಗ ನನಗೆ ಎರಡನೇ ಬಾರಿ ಕೂಡ ಹೆಣ್ಣು ಮಗು ಜನಿಸಿದೆ. ಇದಕ್ಕೆ ಪತಿಯೇ ಕಾರಣ ಎಂದು ಕೊಲೆ ಮಾಡಿದೆ ಎಂದು ಸತ್ಯ ಒಪ್ಪಿಕೊಂಡಿದ್ದಾಳೆ.

ಆರೋಪಿ ಹಾಗೂ ಸುನೀಲ್ ಪ್ರೀತಿಸಿ, 2011ರಲ್ಲಿ ಮದುವೆಯಾಗಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಕೂಡ ಇದ್ದಾರೆ. ಪತಿ ಬೇರೊಬ್ಬಳ ಸಹವಾಸ ಮಾಡಿ ವಂಚಿಸಿದಕ್ಕೆ ಹಾಗೂ ಹೆಣ್ಣು ಮಗುವಾಯ್ತು ಎಂಬ ಕಾರಣಕ್ಕೆ ಬೇಸತ್ತು ಕೊಲೆ ಮಾಡಿದ್ದೇನೆ ಎಂದು ಪತ್ನಿ ಹೇಳಿದ್ದಾಳೆ.

Comments

Leave a Reply

Your email address will not be published. Required fields are marked *