ಆಧಾರ್ ಕಾರ್ಡ್ ತೋರಿಸದಿದ್ದಕ್ಕೆ ಚಿಕಿತ್ಸೆ ನಿರಾಕರಣೆ ಆರೋಪ- ಕಾರ್ಗಿಲ್ ಹುತಾತ್ಮರ ಪತ್ನಿ ಸಾವು

ಸೋನಿಪತ್: ಆಧಾರ ಕಾರ್ಡ್ ತೋರಿಸದಿದ್ದರಿಂದ ವೈದ್ಯರು ಸೂಕ್ತ ಸಮಯಕ್ಕೆ ಚಿಕಿತ್ಸೆ ನಿರಾಕರಿಸಿದ ಪರಿಣಾಮ ಕಾರ್ಗಿಲ್ ಹುತಾತ್ಮ ಯೋಧರ ಪತ್ನಿಯೊಬ್ಬರು ಮೃತಪಟ್ಟ ಶುಕ್ರವಾರ ಹರಿಯಾಣದ ಸೋನಿಪತ್ ನಲ್ಲಿ ನಡೆದಿದೆ.

ಯೋಧರ ಪತ್ನಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಪರಿಣಾಮ ಕುಟಂಬದವರು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು.

ಗಂಭೀರ ಸ್ಥಿತಿಯಲ್ಲಿದ್ದ ನನ್ನ ತಾಯಿಯನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬಂದೆ. ಈ ವೇಳೆ ಆಸ್ಪತ್ರೆ ವೈದ್ಯರು ಆಧಾರ್ ಕಾರ್ಡ್ ತೋರಿಸುವಂತೆ ಹೇಳಿದ್ರು. ಆದರೆ ಆ ಸಂದರ್ಭದಲ್ಲಿ ನನ್ನ ಬಳಿ ಆಧಾರ್ ಕಾರ್ಡ್ ಇರಲಿಲ್ಲ. ಹೀಗಾಗಿ ಮೊಬೈಲ್ ನಲ್ಲಿದ್ದ ಆಧಾರ್ ಕಾರ್ಡ್ ಫೋಟೋ ತೋರಿಸಿದೆ. ಈ ವೇಳೆ ವೈದ್ಯರು ಒರಿಜನಲ್ ದಾಖಲೆಗಳನ್ನು ತಂದು ತೋರಿಸೋವರೆಗೆ ಚಿಕಿತ್ಸೆ ನೀಡುವುದಿಲ್ಲ ಎಂದು ಹೇಳಿದ್ರು. ನನಗೆ ಒಂದು ಗಂಟೆ ಸಮಯಾವಕಾಶ ಕೊಡಿ. ಮನೆಗೆ ಹೋಗಿ ಆಧಾರ್ ಕಾರ್ಡ್ ತಂದು ತೋರಿಸುತ್ತೇನೆ. ಈ ಮೊದಲು ನೀವು ಚಿಕಿತ್ಸೆ ಆರಂಭಿಸಿ ಎಂದೆ, ಆದ್ರೆ ಅವರು ಒಪ್ಪಲಿಲ್ಲ ಅಂತ ಮೃತ ಮಹಿಳೆಯ ಮಗ ಪವನ್ ಕುಮಾರ್ ಹೇಳಿದ್ದಾರೆ.

ಆಸ್ಪತ್ರೆಯ ಮ್ಯಾನೇಜ್‍ಮೆಂಟ್ ಈ ಆರೋಪವನ್ನು ತಳ್ಳಿಹಾಕಿದೆ. ಆದ್ರೆ ಡಾಕ್ಯುಮೆಂಟೇಷನ್‍ಗಾಗಿ ಆಧಾರ್ ಕಾರ್ಡ್ ಅಗತ್ಯ ಎಂಬುದನ್ನ ಒಪ್ಪಿಕೊಂಡಿದೆ.

ಈ ಕುರಿತು ಆಸ್ಪತ್ರೆ ವೈದ್ಯರು ಮಾಧ್ಯಮದ ಜೊತೆ ಪ್ರತಿಕ್ರಿಯಿಸಿ, ನಾವು ಅವರಿಗೆ ಚಿಕಿತ್ಸೆ ನೀಡಲು ನಿರಾಕರಿಸಿಲ್ಲ. ಅವರು ರೋಗಿಯನ್ನ ಅಡ್ಮಿಟ್ ಮಾಡುವ ಮೊದಲೇ ಕರೆದುಕೊಂಡು ಹೋದರು. ನಮ್ಮ ಬಳಿ ಸಿಸಿಟಿವಿ ದೃಶ್ಯಗಳಿವೆ. ವಾರ್ಡ್ ಬಾಯ್ ಅವರನ್ನು ಎಮರ್ಜೆನ್ಸಿ ವಾರ್ಡ್‍ಗೆ ಕರೆದುಕೊಂಡು ಹೋಗಿದ್ದ. ಆದ್ರೆ ಕುಟುಂಬಸ್ಥರು ತಾವಾಗೇ ರೋಗಿಯನ್ನ ಕರೆದುಕೊಂಡು ಹೋದ್ರು ಎಂದು ಹೇಳಿದ್ದಾರೆ.

ಆಧಾರ್ ಕಾರ್ಡ್ ಗಾಗಿ ಇಲ್ಲಿಯವರೆಗೆ ನಾವು ಯಾವುದೇ ಚಿಕಿತ್ಸೆ ನಿರಾಕರಿಸಿಲ್ಲ. ಚಿಕಿತ್ಸೆಗೆ ಆಧಾರ್ ಕಾರ್ಡ್ ಬೇಕಿಲ್ಲ. ಆದ್ರೆ ಡಾಕ್ಯುಮೆಂಟೇಷನ್‍ಗಾಗಿ ಆಧಾರ್ ಕಾರ್ಡ್ ಬೇಕೆ ಬೇಕು ಅಂತ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *