11 ಲಕ್ಷ ಪ್ರಜೆಗಳು ಇದೀಗ ರಷ್ಯಾದ ಒತ್ತೆಯಾಳುಗಳು: ಉಕ್ರೇನ್ ಆರೋಪ

ಕೀವ್: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ 70ನೇ ದಿನವನ್ನು ಪ್ರವೇಶಿಸಿದೆ. ಆದರೆ ಯುದ್ಧದ ಅಂತ್ಯ ಸದ್ಯದಲ್ಲಂತೂ ಸಾಧ್ಯವಿಲ್ಲ ಎಂಬುದು ತೋರುತ್ತಿದೆ.

ರಷ್ಯಾ ಇಂದಿಗೂ ಉಕ್ರೇನ್ ಮೇಲೆ ನಿರಂತರವಾಗಿ ಕ್ಷಿಪಣಿ ಹಾಗೂ ಬಾಂಬ್ ದಾಳಿ ನಡೆಸುತ್ತಿದೆ. ಈ ವೇಳೆ ಮಕ್ಕಳು ಸೇರಿದಂತೆ ಲಕ್ಷಾಂತರ ಉಕ್ರೇನಿಯನ್ನರನ್ನು ರಕ್ಷಿಸಿ ತಮ್ಮ ದೇಶಕ್ಕೆ ಕರೆತಂದಿರುವುದಾಗಿ ರಷ್ಯಾ ಹೇಳಿಕೊಂಡಿದೆ. ಆದರೆ ಉಕ್ರೇನ್ ಸುಮಾರು 2 ಲಕ್ಷ ಮಕ್ಕಳನ್ನು ಬಲವಂತವಾಗಿ ರಷ್ಯಾ ತನ್ನ ದೇಶಕ್ಕೆ ಕರೆದುಕೊಂಡು ಹೋಗುತ್ತಿದೆ ಎಂದು ಆರೋಪಿಸಿದೆ. ಇದನ್ನೂ ಓದಿ: ಉಕ್ರೇನ್ ಕದನ ವಿರಾಮಕ್ಕೆ ಪ್ರಧಾನಿ ಮೋದಿ ಕರೆ

ರಷ್ಯಾ ಉಕ್ರೇನ್ ಮೇಲೆ ದಾಳಿ ಪ್ರಾರಂಭಿಸಿದಾಗಿನಿಂದ ಆಕ್ರಮಿತ ಡಾನ್‌ಬಾಸ್‌ನಿಂದ 1,96,356 ಮಕ್ಕಳು ಸೇರಿದಂತೆ ಒಟ್ಟು 10,92,137 ಉಕ್ರೇನಿಯನ್ನರನ್ನು ರಷ್ಯಾಗೆ ಕರೆತರಲಾಗಿದೆ ಎಂದು ಹೇಳಿದೆ. ಆದರೆ ಈ ಎಲ್ಲಾ ಉಕ್ರೇನಿಯನ್ನರನ್ನು ರಷ್ಯಾ ಸೈನಿಕರು ಒತ್ತೆಯಾಳಾಗಿಸಿಕೊಂಡಿದೆ ಎಂದು ಕೀವ್ ಇಂಡಿಪೆಂಡೆಂಟ್ ವರದಿ ತಿಳಿಸಿದೆ.

ಕೀವ್ ಅಧಿಕಾರಿಗಳ ಸಮನ್ವಯವಿಲ್ಲದೆ ಸೋಮವಾರ 1,847 ಮಕ್ಕಳು ಸೇರಿದಂತೆ 11,500 ಕ್ಕೂ ಹೆಚ್ಚು ಜನರನ್ನು ಉಕ್ರೇನ್‌ನಿಂದ ರಷ್ಯಾಗೆ ಸ್ಥಳಾಂತರಿಸಲಾಗಿದೆ. ಉಕ್ರೇನಿಯನ್ನರ ಕೋರಿಕೆಯ ಮೇರೆಗೆ ಅವರನ್ನು ಸ್ಥಳಾಂತರಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ಆದರೆ ಇದು ಬಲವಂತದ ಸ್ಥಳಾಂತರ ಎಂದು ಉಕ್ರೇನ್ ಆರೋಪಿಸುತ್ತಿದೆ. ಇದನ್ನೂ ಓದಿ: ಪುಟಿನ್‌ಗೆ ಕ್ಯಾನ್ಸರ್‌ – ಯುದ್ಧದ ವೇಳೆ ಅಧಿಕಾರ ಹಸ್ತಾಂತರ ಸಾಧ್ಯತೆ!

ಫೆಬ್ರವರಿ 24ರಿಂದ ಇಲ್ಲಿ ವರೆಗೆ 3,153 ಉಕ್ರೇನ್ ಪ್ರಜೆಗಳು ರಷ್ಯಾ ದಾಳಿಯಿಂದ ಸಾವನ್ನಪ್ಪಿದ್ದಾರೆ ಹಾಗೂ 3,316 ಜನರು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಇತ್ತೀಚೆಗೆ ರಷ್ಯಾ ಪಡೆ ಮಾರಿಯುಪೋಲ್ ಅನ್ನು ಸುತ್ತುವರಿದಿದ್ದು, ಅಲ್ಲಿನ ಅಜೋವ್‌ಸ್ಟಾಲ್ ಉಕ್ಕಿನ ಸ್ಥಾವರದ ಮೇಲೆ ಶೆಲ್ ದಾಳಿ ನಡೆಸಿದೆ. ದಾಳಿಗೂ ಮುನ್ನ ಸುಮಾರು 100 ನಾಗರಿಕರನ್ನು ಹತ್ತಿರದ ಜಪೋರಿಜಿಯಾಗೆ ಸ್ಥಳಾಂತರಿಸಲಾಗಿದೆ.

Comments

Leave a Reply

Your email address will not be published. Required fields are marked *