ಮುಕ್ತ ವಿವಿಗೆ ಇನ್ನು 3 ವರ್ಷ ಮಾನ್ಯತೆ ಸಿಗೋದು ಕಷ್ಟ!

ಮೈಸೂರು: ಕರ್ನಾಟಕ ಮುಕ್ತ ವಿವಿ ಮಾನ್ಯತೆ ಕಳೆದುಕೊಂಡು 4 ವರ್ಷಗಳೆ ಕಳೆದಿದೆ. ಇನ್ನು ಮೂರು ವರ್ಷ ಮಾನ್ಯತೆ ಸಿಗೋದು ಕಷ್ಟ ಎನ್ನುವ ವಿಚಾರವು, ಇದೀಗ ಬೆಳಕಿಗೆ ಬಂದಿದ್ದು ಸ್ವತ: ರಾಜ್ಯ ಹೆಚ್ಚುವರಿ ಕಾರ್ಯದರ್ಶಿಯವರೇ ಟ್ವೀಟ್ ಮೂಲಕ, ತಮ್ಮ ಅಸಹಾಯಕತೆ ಪ್ರದರ್ಶಿಸಿದ್ದಾರೆ.

ಯಾರು, ಏನೇ ಮಾಡಿದ್ರು ಇನ್ನೆರಡು ಶೈಕ್ಷಣಿಕ ವರ್ಷ ಮಾನ್ಯತೆ ಸಿಗೋದು ಕಷ್ಟ ಎನ್ನುತ್ತಿರೋ ಅಧಿಕಾರಿಗಳ ಮಾತುಗಳಿಂದ, ಮುಕ್ತ ವಿವಿ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಈ ಮಧ್ಯೆ ಮುಂದಿನ ದೆಹಲಿ ಪ್ರವಾಸದಲ್ಲಿ ಯುಜಿಸಿ ಅಧಿಕಾರಿಗಳನ್ನು ಭೇಟಿ ಮಾಡುವುದಾಗಿ ಭರವಸೆ ನೀಡಿರುವ ಸಿಎಂ, ಮಾನ್ಯತೆ ಕೊಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಮುಕ್ತ ವಿವಿ ಯುಜಿಸಿ ನಿಯಮಗಳನ್ನ ಉಲ್ಲಂಘಿಸಿರುವುದನ್ನ ನೋಡಿದರೆ, ಸದ್ಯಕ್ಕೆ ಮುಕ್ತ ವಿವಿಗೆ ಮಾನ್ಯತೆ ಸಿಗೋದು ಕಷ್ಟಸಾಧ್ಯ. ಹೀಗೆ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ರಾಜ್ಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರತ್ನ ಪ್ರಭ, ಮುಕ್ತ ವಿವಿಗೆ ಮಾನ್ಯತೆ ಸಿಗುವ ವಿಚಾರವಾಗಿ, ಯಾರು ಏನೂ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ಹೇಳಿದ್ದಾರೆ.

2013ರಲ್ಲಿ ಮಾನ್ಯತೆ ಕಳೆದುಕೊಂಡಿರುವ ಮುಕ್ತ ವಿವಿ. 2017-18 ಹಾಗೂ 2018-19 ಸಾಲಿಗೂ ಮಾನ್ಯತೆ ಪಡೆಯುವುದು ಅನುಮಾನವಾಗಿದೆ. ಅಲ್ಲದೆ ಮುಕ್ತ ವಿವಿಗೆ ಯುಜಿಸಿಯಿಂದ ಹೊಸ ನಿಯಮವಳಿಗಳು ಬಂದರೆ ಮಾತ್ರ ಮಾನ್ಯತೆ ಸಿಗಲು ಅವಕಾಶ ಇದೆ ಎಂದು ಟ್ವೀಟ್ ಮಾಡಿದ್ದಾರೆ. ಅವರ ಈ ಟ್ವೀಟ್ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ವಿವಿಯಲ್ಲಿ ಪದವಿ ಪಡೆದವರ ಎದೆಯಲ್ಲಿ ನಡುಕ ಹುಟ್ಟಿಸಿದೆ.

ಈ ವಿಚಾರವಾಗಿ ಇಂದು ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಕ್ತ ವಿವಿ ಮಾನ್ಯತೆ ರದ್ದಾಗಲು ಸರ್ಕಾರ ಕಾರಣವಲ್ಲ. ಹಿಂದೆ ಇದ್ದ ಕುಲಪತಿಗಳ ಮಾಡಿದ ತಪ್ಪಿನಿಂದಾಗಿ ಮಾನ್ಯತೆ ರದ್ದಾಗಿದೆ. ಈ ಬಗ್ಗೆ ಈಗಾಗಲೆ ಕೇಂದ್ರಕ್ಕೆ ಪತ್ರ ಬರೆದಿದ್ದು. ಮುಂದಿನ ಬಾರಿ ದೆಹಲಿ ಭೇಟಿಯ ಸಂದರ್ಭದಲ್ಲಿ ಯುಜಿಸಿ ಅಧಿಕಾರಿಗಳನ್ನು ಭೇಟಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *