ಹೊಸತೊಡಕು ಗಮ್ಮತ್ತು – ಕೆಜಿ ಮಟನ್‌ಗೆ 900 ರೂ.

– ಕುರಿ, ಮೇಕೆಗೆ ಭಾರೀ ಡಿಮ್ಯಾಂಡ್
– ಹೊರ ಜಿಲ್ಲೆಗಳಿಂದ ಸಿಲಿಕಾನ್ ಸಿಟಿಗೆ ಮಟನ್

ಬೆಂಗಳೂರು: ಹಿಂದೂಗಳ ಹೊಸ ವರ್ಷ ಮೊನ್ನೆಯಿಂದ ಆರಂಭವಾಗಿದೆ. ಯುಗದ ಆದಿ ಶುರುವಾಗೋ ಯುಗಾದಿ ಹಬ್ಬದ ಮಾರನೇ ದಿನ ಹೊಸತೊಡಕು. ಅದರೆ, ನಿನ್ನೆ ಸೋಮವಾರವಾಗಿದ್ದರಿಂದ ಹಿಂದೂಗಳು ಇಂದು ಹೊಸತೊಡಕು ಮಾಡ್ತಿದ್ದಾರೆ. ನಿನ್ನೆ ರಂಜನ್ ಇಂದು ಹೊಸತೊಡಕು ಒಟ್ಟಿಗೆ ಇರುವುದರಿಂದ ಮಟನ್‌ಗೆ ಭಾರೀ ಡಿಮ್ಯಾಂಡ್ ಶುರುವಾಗಿದೆ.

ಇವತ್ತು ಹೊಸತೊಡಕಿನ ದಿನ. ಮೊನ್ನೆ ಯುಗಾದಿ ಹಬ್ಬ ಮಾಡಿ, ದೇವರಿಗೆ ದೀಪ ಹಚ್ಚಿ ಬೇವು-ಬೆಲ್ಲಾ ತಿಂದು, ಹೋಳಿಗೆಯ ರುಚಿ ನೋಡಿದ್ದವರು ಇಂದು ಬಗೆ ಬಗೆಯ ಮಾಂಸಾಹಾರವನ್ನ ಮಾಡಿ ಮನೆಮಂದಿಯೆಲ್ಲರು ಸೇರಿ ಹಬ್ಬ ಮಾಡ್ತಾರೆ. ಮಾಂಸಾಹಾರ ಅಂದ್ಮೇಲೆ ಅಲ್ಲಿ ಕುರಿ, ಮೇಕೆ ಮಾಂಸ ಇಲ್ಲ ಎನ್ನುವಂತಿಲ್ಲ.

ಹೊಸತೊಡಕಿಗಾಗಿ ರಾಜ್ಯದಿಂದ ಮಾತ್ರವಲ್ಲ ಹೊರ ರಾಜ್ಯದಿಂದಲೂ ಕುರಿ ಮೇಕೆಗಳು ಬಂದಿದ್ದು, ಕೆಜಿ ಮಟನ್ ಮಾಂಸಕ್ಕೆ 800 ಇದ್ದದ್ದು, 900 ರವರಗೆ ಆಗಿದೆ.

ಚಿಕನ್, ಮಟನ್ ಖರೀದಿಗೆ ಬೆಳಗ್ಗೆಯೇ ಮಾಂಸದಂಗಡಿಯಲ್ಲಿ ಜನರ ದಂಡು ಇತ್ತು. ಜನರು ಮುಗಿಬಿದ್ದು ಮಾಂಸ ಖರೀದಿಸಿದರು. ಗ್ರಾಮೀಣ ಭಾಗಗಳಲ್ಲಿ ಹಲವು ಕಡೆ ಗುಡ್ಡೆ ಮಾಂಸ ಮಾರಾಟ ಮಾಡಲಾಯಿತು.

ನಿನ್ನೆ ರಂಜನ್ ಹಬ್ಬ ಬೇರೆ. ಹಾಗಾಗಿ ಮಟನ್‌ಗೆ ಭಾರೀ ಬೇಡಿಕೆ ಬಂದಿದ್ದು, ಕುರಿ-ಮೇಕೆಗಳ ಬೆಲೆ ಹೆಚ್ಚಾಗಿದೆ. ಅದರಲ್ಲೂ ನಾಟಿ ಮರಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಇಂದು ಮತ್ತು ನಾಳೆ ಎರಡು ದಿನ ಹೆಚ್ಚಿನ ವ್ಯಾಪಾರ ಕೂಡ ಆಗುವ ನೀರಿಕ್ಷೆ ಇದ್ದು, ಈಗಾಗಲೇ ಮಾಂಸ ವ್ಯಾಪಾರಿಗಳು ಹಬ್ಬಕ್ಕಾಗಿ ಕುರಿ-ಮೇಕೆಗಳನ್ನ ರೈತರಿಂದ ಖರೀದಿಸಿದ್ದಾರೆ. ರೈತರು ಸಹ ಎರಡು ಹಬ್ಬ ಒಟ್ಟಿಗೆ ಬಂದಿರುವುದರಿಂದ ಹೆಚ್ಚಿನ ಲಾಭಕ್ಕೆ ಮರಿಗಳನ್ನ ಮಾರಾಟ ಮಾಡ್ತಿದ್ದಾರೆ.

ಹೊಸತೊಡಕಿಗಾಗಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ದೊಡ್ಡಬಳ್ಳಾಪುರ, ಮಾಗಡಿ, ರಾಮನಗರ, ಗೌರಿಬಿದನೂರು ಸೇರಿದಂತೆ ಇತರೆ ಭಾಗದಿಂದ ಕುರಿ ಮೇಕೆಗಳು ಬೆಂಗಳೂರಿನ ಮಾಂಸದಂಗಡಿಗೆ ಬಂದಿದೆ.