ಉಡುಪಿ: ರುದ್ರ ಸ್ವರೂಪಿ ಪ್ರವಾಹದಿಂದ ಕೊಡಗು ಜಿಲ್ಲೆ ತತ್ತರಿಸಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಜೊತೆ ಖಾಸಗಿ ಸಂಸ್ಥೆಗಳು- ಜನ ಸಾಮಾನ್ಯರು ಕೊಡಗಿಗೆ ಸಹಾಯ ಹಸ್ತ ನೀಡುತ್ತಿದ್ದಾರೆ. ಇತ್ತ ಉಡುಪಿ ಜಿಲ್ಲೆಯ ಮುದರಂಗಡಿಯ ಗೆಳೆಯರ ಬಳಗ, ಕಾಂಗ್ರೆಸ್ ಸ್ಥಾನೀಯ ಸಮಿತಿ ಸದಸ್ಯರು ಕೊಡಗಿನ ನೆರೆಪೀಡಿತ ಸ್ಥಳಗಳಿಗೆ ಹೋಗಿ ಸಹಾಯ ಹಸ್ತ ಚಾಚಿದ್ದಾರೆ.
ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ ಅಕ್ಕಿ, ಬಟ್ಟೆ ಸೀರೆ ಹಾಗೂ ದಿನಬಳಕೆಯ ಸಾಮಾಗ್ರಿಗಳನ್ನು ನೇರವಾಗಿ ಪ್ರವಾಹ ಸಂತ್ರಸ್ತರಿಗೆ ವಿತರಿಸಿದ್ದಾರೆ. ಉಡುಪಿಯ ಎಂಟು ಮಂದಿಯ ತಂಡ ಎರಡು ಟ್ರಕ್ ಗಳಲ್ಲಿ ತೆರಳಿ ಅತಿ ಕ್ಲಿಷ್ಟಕರ ಪರಿಸ್ಥಿತಿಯಲ್ಲಿರುವ ಸೋಮವಾರ ಪೇಟೆ ತಾಲೂಕಿನ ಮಾದಾಪುರ, ಕಿರಗಂದೂರು, ಬಿಳಗೇರಿ, ನಂದಿಘಾಟಿ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ.

ಇಲ್ಲಿನ ಸಂತ್ರಸ್ತರಿಗೆ ಸರ್ಕಾರದ ಪ್ರತಿನಿಧಿಗಳಿಂದ ಯಾವುದೇ ಆಹಾರ ಸಾಮಾಗ್ರಿಗಳು ಮತ್ತು ವೈದ್ಯಕೀಯ ಚಿಕಿತ್ಸೆ ಇದೂವರೆಗೂ ದೊರಕಿಲ್ಲವಂತೆ. ಆ ಭಾಗಗಳಿಗೆ ಸರ್ಕಾರದ ಸಹಾಯ ತಲುಪಬೇಕಿದೆ. ಮಿಲಿಟರಿಯವರು ಈ ಭಾಗಕ್ಕೆ ಭೇಟಿ ನೀಡಿಲ್ಲ. ಸುಮಾರು 45 ಸಂತ್ರಸ್ತರು ನಾಲ್ಕು ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಸರ್ಕಾರ ಇದರ ಬಗ್ಗೆ ಗಮನಹರಿಸಬೇಕಾಗಿದೆ ಎಂದು ಯುವಕರು ತಿಳಿಸಿದರು.
ತಂಡದ ಸದಸ್ಯ ಯೋಗೀಶ್ ಆಚಾರ್ಯ ಇನ್ನಾ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ರಾಜ್ಯದ ಮೂಲೆ ಮೂಲೆಗಳಿಂದ ಬಂದಂತಹ ವಸ್ತು, ಆಹಾರ ಪದಾರ್ಥಗಳು ಮನೆಗಳಿಗೆ ತಲುಪದೆ ಅಲ್ಲಲ್ಲಿ ದಾಸ್ತಾನುಗಳಲ್ಲಿ ಉಳಿದಿವೆ. ಕೆಲವು ಕಡೆಗಳಲ್ಲಿ ಅದರ ದುರ್ಬಳಕೆಗಳು ನಡೆಯುತ್ತಿದ್ದು, ನಿಜವಾದ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಹಂಚುವ ಕಾರ್ಯವಾಗಬೇಕಿದೆ. ಯಾರೇ ಆಹಾರ ವಸ್ತುಗಳನ್ನು ಕಳುಹಿಸುವವರು ಸಾಧ್ಯವಾದರೆ ಜನರಿಗೆ ನೇರವಾಗಿ ಹಂಚಲು ಪ್ರಯತ್ನ ಮಾಡಿದರೆ ಉತ್ತಮ ಎಂದರು.

ಸದಸ್ಯರಾದ ಸುಧೀರ್ ರಾವ್ ಸಾಂತೂರು, ನರಸಿಂಹ ಶೆಣೈ, ಅಲಗೇಸ್ ಸನ್ನೊನಿ, ಪ್ರಭಾಕರ ಆಚಾರ್ಯ ಕಟಪಾಡಿ, ಜಯಂತ್ ಮುದರಂಗಡಿ, ಹಾಗೂ ಕಾರ್ಯಕರ್ತರು ಪರಿಹಾರ ವಿತರಣಾ ಕಾರ್ಯದಲ್ಲಿ ಜೊತೆಗಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply