ದೈವದ ನುಡಿಗೆ ತಲೆಬಾಗಿ ಚುನಾವಣಾ ಕಣದಿಂದ ಹಿಂದೆ ಸರಿದ ಶೀರೂರು ಸ್ವಾಮೀಜಿ

ಉಡುಪಿ: ಇಲ್ಲಿನ ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಈ ಬಾರಿ ಚುನಾವಣಾ ಕಣಕ್ಕೆ ಇಳಿದಿದ್ದು ದೊಡ್ಡ ಸುದ್ದಿಯಾಗಿತ್ತು. ಬಿಜೆಪಿ-ಕಾಂಗ್ರೆಸ್ ಗೆ ಸ್ವಾಮೀಜಿ ಸ್ಪರ್ಧೆ ಕೊಂಚ ಆತಂಕವನ್ನು ಸೃಷ್ಟಿಸಿತ್ತು. ಇದೀಗ ಶೀರೂರು ಸ್ವಾಮೀಜಿ ಕಣದಿಂದ ಹಿಂದೆ ಸರಿದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಬೆಂಬಲ ಕೊಡಲು ನಾಮಪತ್ರ ವಾಪಾಸ್ ಪಡೆದಿರುವುದಾಗಿ ಉಡುಪಿ ಶೀರೂರು ಸ್ವಾಮೀಜಿ ಹೇಳಿಕೊಂಡಿದ್ದರು. ಆದರೆ ಸ್ವಾಮೀಜಿ ಚುನಾವಣಾ ಕಣದಿಂದ ಹಿಂದೆ ಸರಿಯಲು ಕಾರಣ ಸ್ವಾಮೀಜಿಗೆ ದೈವ ಕೊಟ್ಟ ನುಡಿ ಎಂದು ತಿಳಿದುಬಂದಿದೆ.

ಕೊಡಮಣಿತ್ತಾಯ, ರಾಜನ್ ದೈವ, ಬ್ರಹ್ಮ ಬೈದರ್ಕಳ ದೈವಕ್ಕೆ ನರ್ತನ ಸೇವೆ ನೀಡಿದ್ದರು. ಕೋಲ ಸೇವೆಯ ಕೊನೆಗೆ ಯಜಮಾನನ ಮುಂದೆ ನುಡಿ ಕೊಡುವುದು ಸಂಪ್ರದಾಯ. ಕೋಲ ಮಾಡಿಸಿದ ವ್ಯಕ್ತಿ, ಊರಿನ ಜನರು ಮನಸ್ಸಿನ ಇಷ್ಟಾರ್ಥಗಳನ್ನು ಪ್ರಶ್ನೆ ರೂಪದಲ್ಲಿ ಇಡುತ್ತಾರೆ. ಇದಕ್ಕೆ ದೈವದಿಂದ ಉತ್ತರ ರೂಪದ ಪರಿಹಾರ ಕೇಳುತ್ತಾರೆ. ಸ್ವಾಮೀಜಿ ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ನಿನ್ನ ಮನಸ್ಸಿನ ಇಚ್ಛೆ ಏನು ಎಂದು ಕೇಳಿದ್ದಾರೆ. ಈ ಸಂದರ್ಭದಲ್ಲಿ ದೈವ ಸಕಾರಾತ್ಮಕ ಉತ್ತರ ನೀಡಿಲ್ಲ. ಆದ್ದರಿಂದ ಆಶೀರ್ವದಿಸುವ ಕೈ ಜನರ ಮುಂದೆ ಯಾಚನೆ ಮಾಡಬಾರದು. ಇದು ಶೋಭೆಯಲ್ಲ ಅಂತ ದೈವ ನುಡಿ ಕೊಟ್ಟಿದೆ. ಅದರಂತೆ ಸ್ವಾಮೀಜಿ ಕಣದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

ಇದರ ಜೊತೆ ಪ್ರಧಾನಿ ಮೋದಿಯವರ ಚಿಂತನೆ ಬೆಂಬಲಿಸುವ ಶ್ರೀಗಳು ಕಣದಿಂದ ಒಂದು ಕಾಲು ಹಿಂದಿಟ್ಟಿದ್ದಾರೆ. ದೈವದ ನುಡಿಯನ್ನು ಕರಾವಳಿಯಲ್ಲಿ ಯಾರೂ ಮೀರುವುದಿಲ್ಲ. ಶೀರೂರು ಸ್ವಾಮೀಜಿಗೂ ದೈವ-ದೇವರ ಮೇಲೆ ಅಪಾರ ನಂಬಿಕೆಯಿದೆ. ಹೀಗಾಗಿ ಸ್ವಾಮೀಜಿ ಚುನಾವಣೆಗೆ ಮುನ್ನ ಬ್ರಹ್ಮ ಬೈದರ್ಕಳ ದೈವದ ಕೋಲ ಸೇವೆ ಮಾಡಿಸಿ ನುಡಿಯನ್ನು ಅಪೇಕ್ಷಿಸಿದ್ದಾರೆ. ಈ ಸ್ವಾರಸ್ಯಕರ ಕಾರಣ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಶೀರೂರು ಶ್ರೀಗಳು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಅವರು ನಂಬುವ ದೈವಗಳೂ ಕೂಡ ಬೇಡ ಎಂದಿದ್ದವು ಎಂಬ ಕುತೂಹಲಕಾರಿ ಅಂಶ ಈಗ ಬೆಳಕಿಗೆ ಬಂದಿದೆ. ಶೀರೂರು ಶ್ರೀಗಳು ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವುದಾಗಿ ಘೋಷಿಸಿದ ನಂತರ, ತಮ್ಮ ಮಠದಲ್ಲಿ 3 ದಿನಗಳ ದೈವಗಳ ಕೋಲವನ್ನು ವಿಜೃಂಭಣೆಯಿಂದ ಆಯೋಜಿಸಿದ್ದರು.

ಈ ಸಂದರ್ಭದಲ್ಲಿ ಸ್ವಾಮೀಜಿ, ತಾವು ಚುನಾವಣೆಗೆ ಸ್ಪರ್ಧಿಸಬೇಕು ಎಂದು ನಿರ್ಧರಿಸಿದ್ದೇವೆ. ತಮ್ಮನ್ನು ಗೆಲ್ಲಿಸಿಕೊಡುತ್ತೀರಾ ಎಂದು ದೈವಗಳನ್ನು ಕೇಳಿದ್ದರು. ಅದಕ್ಕೆ ದೈವಗಳು ನೀಡಿದ ಉತ್ತರ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ಸ್ವಾಮಿಗಳೇ ನೀವು ದೇವರಿಗಿಂತ ಒಂದು ಪಟ್ಟ ಕೆಳಗಿದ್ದೀರಿ, ಮಠಾಧೀಶರ ಪಟ್ಟ ಶ್ರೇಷ್ಟವಾದ ಪಟ್ಟ. ಅದನ್ನು ಬಿಟ್ಟು ನಿಮ್ಮನ್ನು ಇನ್ನೂ ಕೆಳಗಿನ ಪಟ್ಟದಲ್ಲಿ ನೋಡುವುದಕ್ಕೆ ನಾವು ಇಷ್ಟಪಡುವುದಿಲ್ಲ. ನೀವು ಈಗಿರುವ ಪಟ್ಟವನ್ನು ಬಿಟ್ಟು ಕೆಳಗಿನ ಪಟ್ಟಕ್ಕೆ ಇಳಿಯುವುದಕ್ಕೆ ಹೊರಟರೆ ನಾವು ನಿಮಗೆ ಬೆಂಬಲ ಕೊಡುವುದಿಲ್ಲ ಎಂದು ದೈವ ಹೇಳಿತ್ತು ಎಂದು ಕೋಲದ ಸಂದರ್ಭದಲ್ಲಿ ಉಪಸ್ಥಿತರಿದ್ದವರು ಮಾತಾಡಿಕೊಳ್ಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *