ಕುದಿಯುತ್ತಿದೆ ಸಮುದ್ರದ ನೀರು- ಕಡಲ ತೀರದ ನಿವಾಸಿಗಳಲ್ಲಿ ಆತಂಕ

ಉಡುಪಿ: ಜಾಗತಿಕ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಓಝೋನ್ ಪದರ ಡ್ಯಾಮೇಜ್ ಆಗಿದೆ. ಬಿಸಿಲಿನ ಝಳ ವಿಪರೀತವಾಗಿದೆ. ಈ ನಡುವೆ ಸಮುದ್ರ ತನ್ನ ತಾಪಮಾನ ಮತ್ತು ಮಟ್ಟವನ್ನು ಹೆಚ್ಚಿಸಿಕೊಂಡಿದ್ದು ದೇಶದ ಕರಾವಳಿ ತೀರ ಆತಂಕದಲ್ಲಿದೆ. ಪರಿಸ್ಥಿತಿ ಕೈಮೀರಿದ್ರೆ ನಗರಗಳು ಮುಳುಗೋದು ಗ್ಯಾರೆಂಟಿಯಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ತಾಪಮಾನ ತಾರಕಕ್ಕೇರಿದೆ. ಕಳೆದ ನೂರು ವರ್ಷದಲ್ಲಿ ಭಾರತದ ತಾಪಮಾನ ಒಂದರಿಂದ ಎರಡು ಸೆಲ್ಸಿಯಸ್‍ ನಷ್ಟು ಹೆಚ್ಚಿದೆ. ತಲೆ ಮೇಲಿನ ಸೂರ್ಯ ಸುಡುತ್ತಿದ್ದಾನೆ. ತಾಪಮಾನ ಭೂಮಿಯಲ್ಲಿ ಮಾತ್ರ ಏರಿಕೆಯಾಗಿದ್ದಲ್ಲ, ಸಮುದ್ರದ ನೀರು ಕೂಡ ಕುದಿಯಲಾರಂಭಿಸಿದೆ.

ಹವಾಮಾನ ಇಲಾಖೆಯ ತಜ್ಞರ ಸಂಶೋಧನೆಯಲ್ಲಿ ಇದು ಸಾಬೀತಾಗಿದೆ. ಕಳೆದ 50 ವರ್ಷಗಳಲ್ಲಿ 9 ಸೆಂಟೀಮೀಟರ್ ನಷ್ಟು ಸಮುದ್ರದ ಮಟ್ಟ ಏರಿಕೆಯಾಗಿದೆ. ಅಂದರೆ ಕಡಲ ತೀರದಲ್ಲಿರುವ ನಗರವಾಸಿಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಅರಬ್ಬೀ ಸಮುದ್ರ ಉಡುಪಿ ನಗರಕ್ಕಿಂದ ಏಳೆಂಟು ಮೀಟರ್ ನಷ್ಟು ಕೆಳಗೆ ಇದೆ. ಮಳೆಗಾಲ, ಚಂಡಮಾರುತ ಬಂದಾಗ ಅಂತರ ಕಡಿಮೆಯಾಗುತ್ತದೆ. ಸಮುದ್ರದ ಅಬ್ಬರ ವರ್ಷದಿಂದ ವರ್ಷಕ್ಕೆ ಜಾಸ್ತಿಯಾದ್ರೆ ಒಂದಲ್ಲ ಒಂದು ದಿನ ಕಾರವಾರ, ಉಡುಪಿ- ಮಂಗಳೂರು ನಗರಗಳು ಮುಳುಗೋದು ಪಕ್ಕಾ ಆಗಿದೆ.

ವರ್ಷದಿಂದ ವರ್ಷಕ್ಕೆ ಒಂದೆರಡು ಮಿಲಿಮೀಟರ್ ಸಮುದ್ರದ ಮಟ್ಟ ಏರಿಕೆಯಾಗಿ ಭೂಮಿಯನ್ನು ಕಬಳಿಸುತ್ತಿದೆ. ಆದರೆ ಕಳೆದ 10 ವರ್ಷದ ಅಂಕಿ ಅಂಶಗಳಲ್ಲಿ ವರ್ಷಕ್ಕೆ 7 ಮಿಲಿ ಮೀಟರ್ ಸಮುದ್ರ ಭೂ ಭಾಗವನ್ನು ಕಬ್ಜ ಮಾಡುತ್ತಿದೆ. ಈ ಬಗ್ಗೆ ರಾಜ್ಯಸಭೆಯಲ್ಲೂ ಚರ್ಚೆಯಾಗಿದೆ. ಸಚಿವ ಬಾಬುಲ್ ಸುಪ್ರಿಯೋ ಸದನದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಭೂಮಿಯ ಉಷ್ಣಾಂಶ ಇಳಿಸುವ ಕ್ರಮ ಆಗದಿದ್ದರೆ ಸಮುದ್ರದ ನೀರು ಕರಾವಳಿಯನ್ನು ಮೊದಲು ಆವರಿಸುವ ದಿನ ದೂರವಿಲ್ಲ. ಸಮುದ್ರದ ಮಟ್ಟ ಏರಿಕೆಗೆ ಹಿಮಾಲಯ ಮತ್ತು ಅಂಟಾರ್ಟಿಕಾದಲ್ಲಿ ಹಿಮ ಕರಗಿ ನೀರಾಗುತ್ತಿರುವುದು ಕಾರಣವಂತೆ. ದುಂಡಗಿರುವ ಭೂಮಿಲ್ಲಿ ಸಮುದ್ರ ಒಂದಕ್ಕೊಂದು ಅಂಟಿಕೊಂಡಿರುವುದಿರಿಂದ ಈ ವಿದ್ಯಾಮಾನ ನಡೆಯುತ್ತದೆ ಎಂದು ಪರಿಸರ ವಿಜ್ಞಾನಿ ಎನ್ ಎ ಮಧ್ಯಸ್ಥ ಹೇಳುತ್ತಾರೆ.

ಅರಬ್ಬೀ ಮತ್ತು ಬಂಗಾಳಕೊಲ್ಲಿಯಲ್ಲಿ ಚಂಡಮಾರುತಗಳು ಕೂಡ ಹೆಚ್ಚಾಗಿದೆ. ಕರಾವಳಿ ಭಾಗದಲ್ಲಿ ಅಕಾಲಿಕ ಮಳೆ ಜಾಸ್ತಿಯಾಗಿದೆ. ಚಳಿಗಾಲ ಮಾಯವಾಗಿದ್ದು ಬೇಸಿಗೆ ಮತ್ತು ಮಳೆಗಾಲ ಮಾತ್ರ ಕಾಣಿಸುತ್ತಿದೆ. ಪರಿಸರದ ಮೇಲಿನ ದಾಳಿಯನ್ನು ನಾವು ಕಡಿಮೆ ಮಾಡದಿದ್ದರೆ ಮುಂದೊಂದು ದಿನ ಅಪಾಯ ಉಂಟಾಗುವುದರಲ್ಲಿ ಸಂಶಯವೇ ಇಲ್ಲ ಎಂಬಂತಾಗಿದೆ.

Comments

Leave a Reply

Your email address will not be published. Required fields are marked *