ಶೋಭಾ ಕರಂದ್ಲಾಜೆಯಿಂದ ಶ್ರೀಕೃಷ್ಣನಿಗೆ ಅವಮಾನ – ಮಧ್ವರಾಜ್ ಟಾಂಗ್

ಉಡುಪಿ: ಕೃಷ್ಣ ಮಠದಲ್ಲಿ ಪ್ರಧಾನಿಗೆ ಭದ್ರತೆ ಇಲ್ಲ ಎಂದರೆ ಶ್ರೀ ಕೃಷ್ಣನನ್ನೇ ಅವಮಾನಿಸಿದಂತೆ. ಉಡುಪಿ ಜಿಲ್ಲೆಯ ಜನತೆಗೂ ಮಾಡಿದ ಅವಮಾನ ಅಂತ ಸಚಿವ ಪ್ರಮೋದ್ ಮಧ್ವರಾಜ್ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.

ಉಡುಪಿಯಲ್ಲಿ ಮತಯಾಚನೆ ಸಂದರ್ಭ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಕಾನೂನು ಸುವ್ಯವಸ್ಥೆಯಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಈ ಬಗ್ಗೆ ಲೋಕಸಭಾ ಸದಸ್ಯರು ಹೆಮ್ಮೆಪಡಬೇಕು. ಅದು ಬಿಟ್ಟು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದರು.

ಶ್ರೀ ಕೃಷ್ಣ ನಷ್ಟು ಶಕ್ತಿಶಾಲಿ ದೇವರು ಯಾರಿದ್ದಾರೆ. ಕೃಷ್ಣನ ಆಶೀರ್ವಾದದಿಂದ ನನಗೆ ಮೂರು ಬಾರಿ ಭಡ್ತಿ ಸಿಕ್ಕಿತು. ಪ್ರಧಾನಿ ಬಾರದೇ ಇರುವುದಕ್ಕೆ ಈ ರೀತಿ ಸಬೂಬು ನೀಡುವುದು ಸರಿಯಲ್ಲ ಎಂದು ಹೇಳಿದರು.

ಈ ಮೊದಲು ಬಿಜೆಪಿಯವರು ಸಿದ್ದರಾಮಯ್ಯ ಮಠಕ್ಕೆ ಬಂದಿಲ್ಲ ಎಂದು ಬೊಬ್ಬೆ ಹಾಕುತ್ತಿದ್ದರು. ಆದರೆ ಪ್ರಧಾನ ಮಂತ್ರಿ ಬರುವುದಿಲ್ಲ ಎಂದು ಗೊತ್ತಾದ ಮೇಲೂ ನಾಟಕಮಾಡಿದ್ದು ಯಾಕೆ? ಪೂಜೆ ಸ್ಥಗಿತ ಮಾಡಿ ಭಕ್ತರನ್ನು ತಡೆದಿದ್ದೇಕೆ? ಪ್ರಧಾನಿ ಭೇಟಿ ನೀಡುತ್ತಾರೆ ಅಂತಾ ಸುಳ್ಳು ಸುದ್ದಿ ಹಬ್ಬಿಸಿದ್ದೇಕೆ ಎಂದು ಪ್ರಶ್ನೆ ಮಾಡಿದರು.

ಶೋಭಾ ಕರಂದ್ಲಾಜೆ ಇಡೀ ರಾಜ್ಯ ಸುತ್ತಾಡುವುದರಿಂದ ತಮ್ಮದು ಯಾವ ಕ್ಷೇತ್ರ ಅಂತಾನೇ ಮರೆತುಹೋಗಿರಬಹುದು ಅಂತ ಸಚಿವರು ವ್ಯಂಗ್ಯವಾಡಿದರು.

ಪ್ರಧಾನಿ ಮೋದಿಯವರಿಗೆ ಜೀವ ಬೆದರಿಕೆ ಇದ್ದ ಹಿನ್ನೆಲೆಯಲ್ಲಿ ಮಠಕ್ಕೆ ಭೇಟಿ ನೀಡಿರಲಿಲ್ಲ ಎಂದು ನಿನ್ನೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದರು.

Comments

Leave a Reply

Your email address will not be published. Required fields are marked *