ಉಡುಪಿಯಲ್ಲಿ ಎರಡು ವರ್ಷಕ್ಕೊಮ್ಮೆ ಪರ್ಯಾಯೋತ್ಸವ ಅಂದರೆ ಉಡುಪಿ ಜನರಲ್ಲಿ ಹಬ್ಬದ ಸಡಗರ. ಎರಡು ವರ್ಷಗಳಿಗೆ ಒಮ್ಮೆ ಬರುವ ಈ ದ್ವಿವಾರ್ಷಿಕ ಉತ್ಸವದ ಸಂದರ್ಭ ಉಡುಪಿಯ ನಗರ ಸಿಂಗಾರಗೊಳ್ಳುತ್ತದೆ.ಜನವರಿ ತಿಂಗಳ ಚಳಿಗಾಲದ ರಾತ್ರಿಯಲ್ಲಿ ಬೀದಿಯ ತುಂಬೆಲ್ಲಾ ಜಗಮಗ ಬೆಳಕು ರಾರಾಜಿಸುತ್ತಾ ಕಣ್ಮನ ಸೆಳೆಯುತ್ತದೆ. ಈಗ ಪುನಃ ಉಡುಪಿಯಲ್ಲಿ ಸಂಭ್ರಮ ಮನೆ ಮಾಡಿದೆ. ಅಷ್ಟಕ್ಕೂ ಉಡುಪಿ ಪರ್ಯಾಯ ಎಂದರೆ ಏನು? ಪರ್ಯಾಯೋತ್ಸವ ಎಂದರೆ ಯಾವ ಉತ್ಸವ? ಈ ಉತ್ಸವವನ್ನು ಜನರು ಏಕೆ ಇಷ್ಟು ಸಂಭ್ರಮಿಸುತ್ತಾರೆ? ಉತ್ಸವದ ಇತಿಹಾಸ ಏನು? ಈ ಬಗ್ಗೆ ವಿವರಗಳು ಇಲ್ಲಿದೆ.

ಮಧ್ವಾಚಾರ್ಯರು ಉಡುಪಿಯಲ್ಲಿ ಕೃಷ್ಣಮಠವನ್ನು ಸ್ಥಾಪನೆ ಮಾಡಿದರು. ಶ್ರೀಕೃಷ್ಣನಿಗೆ ಪೂಜೆ ಮಾಡಲು ಎಂಟು ಮಂದಿ ಯತಿಗಳನ್ನು ನೇಮಿಸಿದ್ದರು. ಆರಂಭದಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ಪೂಜಾ ಅಧಿಕಾರ ಎಂಟು ಮಠಗಳ ನಡುವೆ ಹಸ್ತಾಂತರವಾಗುತ್ತಿತ್ತು ನಂತರ ಎರಡು ವರ್ಷಕ್ಕೆ ವಿಸ್ತರಣೆ ಆಯ್ತು.

ಅದಮಾರು ಮಠ ಎರಡು ವರ್ಷ ಪರ್ಯಾಯ ಅಧಿಕಾರ ಪೂರೈಸಿದ್ದು, ಇನ್ನು 14 ವರ್ಷದ ನಂತರ ಶ್ರೀಗಳು ಮತ್ತೆ ಕೃಷ್ಣನ ಪೂಜಾಧಿಕಾರ ವಹಿಸಿಕೊಳ್ಳಲಿದ್ದಾರೆ. ನಡುರಾತ್ರಿ ಆರಂಭವಾಗುವ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಬೆಳಗಿನ ಜಾವ ಸಾಂಪ್ರದಾಯಿಕ ಪ್ರಕ್ರಿಯೆಗಳು ಮುಗಿದುಬಿಡುತ್ತದೆ. ಫೋಟೋಗಳ ಮೂಲಕ ಪರ್ಯಾಯ ಮಹೋತ್ಸವದ ಎಲ್ಲ ಪ್ರಕ್ರಿಯೆಗಳನ್ನು ಇಲ್ಲಿ ವಿವರಿಸಲಾಗುವುದು. ಇದನ್ನೂ ಓದಿ: ಎರಡು ವರ್ಷ ಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆ – ಕೃಷ್ಣಾಪುರ ಸ್ವಾಮೀಜಿ ಘೋಷಣೆ

ಹೇಗೆ ನಡೆಯಿತು?
ಕಾಪು ತಾಲೂಕಿನ ದಂಡ ತೀರ್ಥದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ರಾತ್ರಿ 1:30 ಕ್ಕೆ ಪವಿತ್ರ ಸ್ನಾನ ಮಾಡಿದರು. ಈ ಸಂದರ್ಭ ಹತ್ತಾರು ಭಕ್ತರು ಸ್ವಾಮೀಜಿಗಳ ಜೊತೆ ತೀರ್ಥಸ್ನಾನದಲ್ಲಿ ಜೊತೆಯಾದರು. ಉಡುಪಿ ನಗರಕ್ಕೆ ಆಗಮಿಸಿ ಜೋಡುಕಟ್ಟೆಯಲ್ಲಿ ಪಟ್ಟದ ದೇವರಿಗೆ ಮಂಗಳಾರತಿ ಮಾಡುವ ಮೂಲಕ ದೀಪ ಬೆಳಗಿಸಿ ಪರ್ಯಾಯ ಮೆರವಣಿಗೆ ಆರಂಭವಾಯಿತು. ಉಡುಪಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು. ಸೀಮಿತ ಟ್ಯಾಬ್ಲೋ ಕಲಾತಂಡಗಳ ಜೊತೆಗೆ ಪಲ್ಲಕ್ಕಿ ಟ್ಯಾಬ್ಲೋದಲ್ಲಿ ಕೂತು ಸ್ವಾಮೀಜಿಗಳು ಮಠದತ್ತ ಸಾಗಿದರು.

ರಥಬೀದಿಗೆ ಬಿಳಿ ಹಾಸು ಹಾಸಲಾಗಿತ್ತು. ಅದರ ಮೇಲೆ ಎಲ್ಲ ಸ್ವಾಮೀಜಿಗಳು ನಡೆದುಕೊಂಡು ಬಂದು ಕನಕನ ಕಿಂಡಿಯಲ್ಲಿ 4:30ಕ್ಕೆ ಶ್ರೀ ಕೃಷ್ಣದೇವರ ದರ್ಶನ ಮಾಡಿ ನವಗ್ರಹ ದಾನ ನೀಡಿ ಚಂದ್ರಮೌಳೀಶ್ವರ ಮತ್ತು ಅನಂತೇಶ್ವರ ದೇವರ ದರ್ಶನ ಪಡೆದರು. ಅನಂತೇಶ್ವರದಲ್ಲಿ ಶ್ರೀ ಮಧ್ವಾಚಾರ್ಯರ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಸಿದರು. ಶ್ರೀ ಕೃಷ್ಣ ಮಠದ ಮುಂಭಾಗದಲ್ಲಿ 5:25 ಕ್ಕೆ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಎಲ್ಲ ಶ್ರೀಗಳನ್ನು ಸ್ವಾಗತಿಸಿದರು.

ಶ್ರೀಕೃಷ್ಣ ದೇವರ ದರ್ಶನ ಪಡೆದು ಕೃಷ್ಣಾಪುರ ಮಠದ ಪಟ್ಟದ ದೇವರಿಗೆ ಮಂಗಳಾರತಿ ಬೆಳಗಿ ಚಂದ್ರಶಾಲೆಯಲ್ಲಿ ಪರ್ಯಾಯ ಅದಮಾರು ಮಠದ ವತಿಯಿಂದ ಮಾಲಿಕೆ ಮಂಗಳಾರತಿ ನಡೆಯಿತು. ಮಧ್ವಾಚಾರ್ಯರ ಸನ್ನಿಧಿಯ ಎದುರು ಅದಮಾರು ಮಠಾಧೀಶರು ಕೃಷ್ಣಾಪುರ ಮಠಾಧೀಶರಿಗೆ 5:45 ಕ್ಕೆ ಅಕ್ಷಯ ಪಾತ್ರೆ, ಸಟ್ಟುಗ ಹಸ್ತಾಂತರ ಮಾಡಿದರು. ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಚತುರ್ಥ ಬಾರಿ ಸರ್ವಜ್ಞ ಪೀಠಾರೋಹಣ ಮಾಡಿದರು. ಪರ್ಯಾಯ ಶ್ರೀಗಳಿಂದ ಬಡಗುಮಾಳಿಗೆಯ ಅರಳು ಗದ್ದುಗೆ ವಿಧಿ ನಡೆಯಿತು. ಇದನ್ನೂ ಓದಿ: ಕೋವಿಡ್ ಕಾಲಘಟ್ಟದಲ್ಲಿ ಸರಳ ಪರ್ಯಾಯ: ಕೃಷ್ಣಾಪುರ ವಿದ್ಯಾಸಾಗರ ತೀರ್ಥ ಸ್ವಾಮೀಜಿ

ಅರಳಿನ ಗದ್ದಿಗೆ ಮೇಲೆ ಪರಸ್ಪರ ಸ್ವಾಮಿಗಳು ಗಂದಾದ್ಯುಪಚಾರ, ಅಷ್ಟ ಮಠಾಧೀಶರಿಂದ ಪಟ್ಟಕಣಿಕೆ ಹಾಗೂ ಮಾಲಿಕೆ ಮಂಗಳಾರತಿ ನಡೆಯಿತು. ಈ ಸಂದರ್ಭ ಎಲ್ಲ ಸ್ವಾಮೀಜಿಗಳು ಉಭಯ ಕುಶಲೋಪರಿಯಲ್ಲಿ ತೊಡಗಿದರು. 6:45 ಕ್ಕೆ ಸರಿಯಾಗಿ ಪರ್ಯಾಯ ದರ್ಬಾರ್ ನಡೆಯಿತು. ಸಾರ್ವಜನಿಕರು ಮಠದ ಭಕ್ತರು ದರ್ಬಾರ್ ಸಭೆಯಲ್ಲಿ ಭಾಗಿಯಾದರು. ನಾಲ್ಕನೇ ಸುತ್ತಿನ ಪರ್ಯಾಯ ಪೀಠಾಧಿಪತಿ ಕೃಷ್ಣಾಪುರ ಸ್ವಾಮೀಜಿ ದರ್ಬಾರ್ ಸಭೆ ಮುಗಿಸಿ ನೂತನ ಶ್ರೀಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದರು.

Leave a Reply