ಮದ್ವೆ ಆಮಂತ್ರಣ ನೀಡೋ ನೆಪದಲ್ಲಿ ಸುಲಿಗೆಗೆ ಯತ್ನ

– ಕೊಲೆ ಆರೋಪಿಗಳಿಗೆ ಬಿತ್ತು ಗೂಸಾ

ಉಡುಪಿ: ಮದುವೆ ಆಮಂತ್ರಣ ಕೊಡುವ ನೆಪದಲ್ಲಿ ಒಂಟಿ ಮಹಿಳೆಯ ಮನೆಗೆ ನುಗ್ಗಿ ಸುಲಿಗೆ ಮಾಡಲು ಯತ್ನಿಸಿದ ಕೊಲೆ ಆರೋಪಿಗಳಿಗೆ ಸಖತ್ ಗೂಸಾ ಬಿದ್ದಿದೆ. ಈ ಘಟನೆ ಉಡುಪಿ ಜಿಲ್ಲೆ ಕುಂದಾಪುರದ ಜಿ.ಎಂ. ರೋಡ್ ಮಸೀದಿ ಬಳಿ ನಡೆದಿದ್ದು, ಮಹಿಳೆ ಮತ್ತು ಯುವಕನನ್ನು ಪೋಲಿಸರಿಗೆ ಒಪ್ಪಿಸಲಾಗಿದೆ.

ಕಾಪು ಮಜೂರಿನ ಮಹಿಳೆ ಫಿರ್ದೋಸ್ ಮತ್ತು ಕಾರ್ಕಳ ತಾಲೂಕು ಕುಂಟಲಪಾಡಿಯ ನಿವಾಸಿ ಮೊಹಮ್ಮದ್ ಆಸೀಫ್ ಬಂಧಿತ ಆರೋಪಿಗಳು. ಆಸೀಫ್ ಕುಂದಾಪುರ ಜಿ. ಎಂ ರೋಡ್ ನಿವಾಸಿಯಾಗಿದ್ದು, ಮೆಹರುನ್ನೀಸಾ(74) ಕುಟುಂಬಕ್ಕೆ ಡ್ರೈವರ್ ಆಗಿದ್ದನು.

ಹಳೆಯ ಪರಿಚಯದ ನೆಪದಲ್ಲಿ ಕುಟುಂಬದ ಮತ್ತು ಮನೆಯ ಆಗುಹೋಗುಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡಿದ್ದನು. ನಿನ್ನೆ ಶುಕ್ರವಾರವಾದ ಕಾರಣ ಮೆಹರುನ್ನೀಸಾ ಅವರ ಪತಿ ಅಬು ಮಹಮ್ಮದ್ ಮಸೀದಿಗೆ ತೆರಳಿದ್ದರು. ಇದೇ ಸಂದರ್ಭ ಮದುವೆ ಆಮಂತ್ರಣ ಪತ್ರಿಕೆ ಕೊಡೋ ನೆಪದಲ್ಲಿ ಮನೆಗೆ ಬಂದ ಇಬ್ಬರು ಆರೋಪಿಗಳು, ಮೆಹರುನ್ನೀಸಾ ಅವರ ಕೈಯನ್ನು ಕಟ್ಟಿ ಕುತ್ತಿಗೆಯಲ್ಲಿದ್ದ ಚಿನ್ನದ ಒಡವೆಗಳನ್ನು ಕಸಿದಿದ್ದಾರೆ.

ಇದೇ ಸಂದರ್ಭ ಮೆಹರುನ್ನೀಸಾ ಕೂಗಾಡಿದ್ದನ್ನು ಕೇಳಿದ ಸಾರ್ವಜನಿಕರು ಆಗಮಿಸಿ ಇಬ್ಬರಿಗೂ ಚೆನ್ನಾಗಿ ಗೂಸ ನೀಡಿದ್ದಾರೆ. ಆರೋಪಿ ಮಹಿಳೆ ಫಿರ್ದೋಸ್, ಆಸೀಫ್ ಜೊತೆ ಸೇರಿ ತನ್ನ ಪತಿ ಸಮೀರ್ ನನ್ನು ತಮಿಳುನಾಡಿಗೆ ಕರೆದುಕೊಂಡು ಮೋಸದಿಂದ ಕೊಲೆಗೈದ ಆರೋಪಿಗಳಾಗಿದ್ದಾರೆ.

ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಕಳೆದ ತಿಂಗಳಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದೀಗ ಮತ್ತೆ ಇಬ್ಬರೂ ಸೇರಿ ಈ ಕೃತ್ಯ ಎಸಗಿದ್ದಾರೆ. ಈ ಸಂಬಂಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *