ಉಡುಪಿಯಲ್ಲಿ ಮೀನಿನ ಸುಗ್ಗಿ- ಹರಿಯುವ ತೊರೆಯಲ್ಲಿ ರಾಶಿ ರಾಶಿ ಮೀನುಗಳು

ಉಡುಪಿ: ಕಲ್ಲಿನೊಳಗೆ ಅವಿತಿದ್ದ ಮೀನುಗಳು ಮುಂಗಾರು ಮಳೆ ಬಿದ್ದೊಡನೆ ಹೊರ ಬರುತ್ತಿದೆ. ಉಡುಪಿ ನಗರದ ಬನ್ನಂಜೆ, ಕಲ್ಸಂಕದ ತೊರೆಯಲ್ಲಿ ರಾಶಿ ರಾಶಿ ಮೀನುಗಳು ಕಾಣಸಿಕ್ಕಿದೆ. ಬನ್ನಂಜೆ ಪರಿಸರದ ಹರಿಯುವ ತೋಡಿನಲ್ಲಿ ಮೀನುಗಳ ರಾಶಿ ಸ್ಥಳೀಯರನ್ನು ಆಕರ್ಷಿಸಿದೆ.

ತೊರೆಯ ಮೀನು ಹಿಡಿಯುವುದರಲ್ಲಿ ಉಡುಪಿಯ ಜನರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕೆಲವರು ಮೀನು ಹಿಡಿದು ಮನೆ ಸೇರಿದ್ರೆ, ಮತ್ತೆ ಕೆಲವರು ಮಾರಾಟ ಮಾಡಿ ಹಣ ಗಳಿಸುತ್ತಿದ್ದಾರೆ. ಈ ಮೀನುಗಳು ರಾತ್ರಿ ಹೊತ್ತು ಗದ್ದೆಬದಿಯ ತೊರೆಯಲ್ಲಿ, ಮಳೆಗಾಲ ಆರಂಭವಾದಾಗ ಕೆರೆಗಳಲ್ಲಿ ಕಾಣಸಿಗುತ್ತಿತ್ತು. ಈ ಬಾರಿ ಹಗಲಲ್ಲೇ ಕೆಸರು ನೀರಲ್ಲಿ ಕಾಣಿಸಿಕೊಂಡಿದೆ.

ನಗರ ಭಾಗದಲ್ಲೇ ಮೀನು ಕಾಣ ಸಿಕ್ಕಿರುವುದರಿಂದ ಜನಕ್ಕೆ ಆಶ್ಚರ್ಯವಾಗಿದೆ. ಮೀನಿಗೆ ಉದ್ದನೆಯ ಮೀಸೆ ಇರುವುದರಿಂದ ಜನರ ಕುತೂಹಲಕ್ಕೆ ಕಾರಣವಾಗಿದೆ. ಹತ್ತಾರು ಜನ ತೊರೆಗಿಳಿದು ಮೀನು ಹಿಡಿದಿದ್ದಾರೆ.

ಈ ಬಗ್ಗೆ ಸ್ಥಳೀಯ ನಿವಾಸಿ ಪ್ರಮೋದ್ ಕಟಪಾಡಿ ಮಾತನಾಡಿ, ಹಳ್ಳಿಯಲ್ಲಿ ಮೊದಲ ಮಳೆಗೆ ಉಬರ್ ಹಿಡಿಯುವ ಸಂಪ್ರದಾಯ ಇದೆ. ರಾತ್ರಿ ಗ್ಯಾಸ್ ಲೈಟ್ ತೆಗೆದುಕೊಂಡು ಗದ್ದೆ ಬದಿ ಹೋಗಿ ಮೀನು ಹಿಡಿಯುತ್ತೇವೆ. ಟಾರ್ಚ್ ಲೈಟ್ ಹಾಕಿ ದೊಡ್ಡ ಗಾತ್ರದ ಮೀನನ್ನು ಕತ್ತಿಯಲ್ಲೇ ಚುಚ್ಚಿ ಹಿಡಿದು ತರುತ್ತೇವೆ. ಅಂದೇ ರಾತ್ರಿ ಅದರ ಅಡುಗೆ ಮಾಡಿ ಊಟ ಮಾಡುವ ಖುಷಿಯೇ ಬೇರೆ ಎಂದು ಹೇಳುತ್ತಾರೆ. ಉಡುಪಿ ಪರಿಸರದ ತೊರೆಯಲ್ಲಿ ಸಿಕ್ಕಿದ್ದು ಚೇಕ್ಡೆ ಮೀನು. ಮುಗುಡು ಇನ್ನೂ ದೊಡ್ಡ ಗಾತ್ರದ್ದು ಎಂದು ಅವರು ತಿಳಿಸಿದರು.

Comments

Leave a Reply

Your email address will not be published. Required fields are marked *