14 ದಿನದ ಷರತ್ತಿಗೆ ಒಪ್ಪುವುದಾದ್ರೆ ಉಡುಪಿಗೆ ಸ್ವಾಗತ: ಜಿಲ್ಲಾಧಿಕಾರಿ ಜಿ. ಜಗದೀಶ್

ಉಡುಪಿ: ಹೊರ ದೇಶ ಮತ್ತು ಹೊರ ರಾಜ್ಯದಿಂದ ಬರುವವರು ಸರ್ಕಾರಿ ಕ್ವಾರಂಟೈನ್ ಒಪ್ಪುವುದಾದರೆ ಉಡುಪಿ ಜಿಲ್ಲೆಗೆ ನಿಮಗೆ ಸ್ವಾಗತ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದ್ದಾರೆ.

ಇಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹೊರ ದೇಶ ಮತ್ತು ಹೊರ ರಾಜ್ಯದಿಂದ ಉಡುಪಿ ಜಿಲ್ಲೆಗೆ ಬರುವವರು ಸೇವಾ ಸಿಂಧು ಆ್ಯಪ್ ಮೂಲಕ ರಿಜಿಸ್ಟರ್ ಮಾಡಿಕೊಳ್ಳಿ. ನಿಮ್ಮ ಮೊಬೈಲ್‍ಗೆ ಈ ಪಾಸ್ ಬರುತ್ತದೆ. ತಪಾಸಣೆ ಮಾಡಿ ಉಡುಪಿ ಜಿಲ್ಲಾ ಪ್ರವೇಶ ಮಾಡಬಹುದು ಎಂದು ಡಿಸಿ ಜಗದೀಶ್ ಮಾಹಿತಿ ನೀಡಿದರು.

ಉಡುಪಿ ಜಿಲ್ಲೆಯಲ್ಲಿ ಕಳೆದ ನಲವತ್ತು ದಿನಗಳಿಂದ ಯಾವುದೇ ಪಾಸಿಟಿವ್ ಕೇಸುಗಳು ಇಲ್ಲ. ಹಾಗಾಗಿ ಕೇಂದ್ರ ಸರ್ಕಾರ ಉಡುಪಿ ಜಿಲ್ಲೆಯನ್ನು ಗ್ರೀನ್ ಝೋನ್ ಎಂದು ಘೋಷಣೆ ಮಾಡಿದೆ. ಜಿಲ್ಲೆಯನ್ನು ಗ್ರೀನ್ ಝೋನ್ ವ್ಯಾಪ್ತಿಯಲ್ಲಿ ಮುಂದುವರಿಸಲು ಹೊರ ರಾಜ್ಯ ಮತ್ತು ಹೊರ ದೇಶದಿಂದ ಬರುವವರು ಸಹಕರಿಸಿ ಎಂದು ವಿನಂತಿ ಮಾಡಿದ್ದಾರೆ. ಈ ಪಾಸ್ ತೆಗೆದುಕೊಂಡು ಬಂದವರನ್ನು ಹದಿನಾಲ್ಕು ದಿನ ಕಡ್ಡಾಯವಾಗಿ ಸರ್ಕಾರ ಕ್ವಾರಂಟೈನ್ ಮಾಡುತ್ತೇವೆ. ಈಗಾಗಲೇ ಹಾಸ್ಟೆಲ್ ಗಳನ್ನು ನಿಗದಿ ಮಾಡಿದ್ದೇವೆ. ಉಪಹಾರ ಮತ್ತು ಊಟವನ್ನು ಉಚಿತವಾಗಿ ಕೊಡುತ್ತೇವೆ. ಕ್ವಾರಂಟೈನ್ ಅವಧಿ ಮುಗಿಸಿ ಅವರು ಸೇಫ್ ಆಗಿ ಮನೆಗೆ ಹೋಗಬಹುದು ಎಂದು ಡಿಸಿ ಹೇಳಿದರು.

ಸರ್ಕಾರಿ ವ್ಯವಸ್ಥೆಯಲ್ಲಿ ಉಳಿದುಕೊಳ್ಳುವ ಇಚ್ಛೆ ಇಲ್ಲದಿದ್ದರೆ ಹೋಟೆಲ್ ಅಥವಾ ಲಾಡ್ಜಿಂಗ್ ಅರೇಂಜ್ಮೆಂಟ್ ಮಾಡುತ್ತೇವೆ. ಅಲ್ಲಿನ ಸಂಪೂರ್ಣ ವೆಚ್ಚವನ್ನು ಅವರೇ ಭರಿಸತಕ್ಕದ್ದು ಎಂದು ಅವರು ತಿಳಿಸಿದರು. ಜನಪ್ರತಿನಿಧಿಗಳು, ಅಧಿಕಾರಿಗಳು, ವೈದ್ಯರ ತಂಡ ಸಭೆ ನಡೆಸಿ ಈ ತೀರ್ಮಾನಕ್ಕೆ ಬಂದಿರುವುದಾಗಿ ಅವರು ಹೇಳಿದರು.

Comments

Leave a Reply

Your email address will not be published. Required fields are marked *