– ರೋಗಿಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು
ಉಡುಪಿ: ಜಿಲ್ಲೆಯ ಕಾಪು ಮೂಲದ ಕೊರೊನಾ ಸೋಂಕಿತ ವ್ಯಕ್ತಿ ಮೇಲೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಗರಂ ಆಗಿದ್ದಾರೆ. ಸಂಪರ್ಕಕ್ಕೆ ಬಂದ ಎಲ್ಲ ರೋಗಿಗಳ ವೆಚ್ಚ ಅವನೇ ಭರಿಸಬೇಕು ಎಂದು ಗುಡುಗಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹೋಮ್ ಕ್ವಾರಂಟೈನ್‍ನಲ್ಲಿ ಇರಬೇಕಾದ ವ್ಯಕ್ತಿ ಕ್ರಿಕೆಟ್ ಆಡಿದ್ದಾನೆ. ಆತ ನಿಯಮ ಉಲ್ಲಂಘನೆ ಮಾಡಿ ಎಲ್ಲ ಕಡೆ ಓಡಾಡಿದ್ದಾನೆ. ಹೋಮ್ ಕ್ವಾರಂಟೈನ್‍ನ ಸೂಚನೆ ನೀಡಿದರೂ ಆ ವ್ಯಕ್ತಿ ಹೊರಗಡೆ ತಿರುಗಾಡಿದ್ದಾನೆ. ಆತನಿಂದ ಎಲ್ಲರ ವೆಚ್ಚವನ್ನು ವಸೂಲಿ ಮಾಡುತ್ತೇನೆ ಎಂದರು.

ಇಡೀ ಊರಿಗೆ ಆದ ವೆಚ್ಚವನ್ನು ಆ ರೋಗಿ ಕೊಡಬೇಕು. ಆ ವ್ಯಕ್ತಿಯ ಮೇಲೆ ಕ್ರಿಮಿನಲ್ ಕೇಸು ಕೂಡ ದಾಖಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಕ್ವಾರಂಟೈನ್ ಸಂದರ್ಭದಲ್ಲಿ ಉದ್ಧಟತನ ತೋರಿದ ಎಲ್ಲರಿಂದ ವೆಚ್ಚವನ್ನು ವಸೂಲಿ ಮಾಡುತ್ತೇವೆ. ಕಾನೂನು ಉಲ್ಲಂಘಿಸಿದವರಿಗೆ ಎರಡು ವರ್ಷ ಜೈಲುವಾಸ ವಿಧಿಸುವ ಅವಕಾಶ ಇದೆ ಎಂದು ಹೇಳಿದರು.
ವಿದೇಶದಿಂದ ಬಂದ ವ್ಯಕ್ತಿ ಕೊಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓಡಾಡಿದ್ದು, ಪ್ರಕರಣ ದಾಖಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಎಂಟು ಮಂದಿಯ ಮೇಲೆ ಪ್ರಕರಣ ದಾಖಲಿಸಿದ್ದೇವೆ. ಕ್ವಾರಂಟೈನ್‍ನಲ್ಲಿ ಇರುವವರನ್ನು ಅವರ ಕುಟುಂಬದವರು ಹೊರ ಬಾರದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ದೆಹಲಿ ಜಮಾತ್ ಸಮಾವೇಶ:
ದೆಹಲಿಯ ನಿಜಾಮುದ್ದೀನ್‍ನಲ್ಲಿ ನಡೆದಿದ್ದ ತಬ್ಲಿಘ್ ಸಮಾವೇಶದಲ್ಲಿ ನಮ್ಮ ಜಿಲ್ಲೆಯಿಂದ ಯಾರೂ ಪಾಲ್ಗೊಂಡಿಲ್ಲ ಎಂದು ಉಡುಪಿ ಡಿಸಿ ಜಿ.ಜಗದೀಶ್ ಸ್ಪಷ್ಟಪಡಿಸಿದರು.
ದೆಹಲಿಗೆ ಆ ಸಂದರ್ಭದಲ್ಲಿ ಓಡಾಡಿದವರು ಹದಿನಾರು ಮಂದಿ ಇದ್ದಾರೆ. ಮೊಬೈಲ್ ಟವರ್ ಲೊಕೇಶನ್‍ನಲ್ಲಿ ನಮ್ಮ ಜಿಲ್ಲೆಯ ಹದಿನಾರು ಮಂದಿ ಇದ್ದರು. ಈ ಪೈಕಿ ಒಂಬತ್ತು ಮಂದಿಯನ್ನು ಹಾಸ್ಪಿಟಲ್ ಕ್ವಾರಂಟೈನ್ ಮಾಡಿದ್ದೇವೆ. ಉಳಿದ ಏಳು ಮಂದಿ ಬೇರೆ ಬೇರೆ ಊರುಗಳಲ್ಲಿದ್ದಾರೆ. ಸರ್ಕಾರಕ್ಕೆ ಎಲ್ಲಾ ಮಾಹಿತಿಯನ್ನು ರವಾನೆ ಮಾಡಿದ್ದೇವೆ ಎಂದರು.

ಭಾರತ್ ಬಂದ್ ಸಂದರ್ಭದಲ್ಲಿ ಕೂಲಿ ಕಾರ್ಮಿಕರನ್ನು ನಾವು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಹೊರ ಜಿಲ್ಲೆಯವರು ಆತಂಕಪಡುವ ಅಗತ್ಯವಿಲ್ಲ. ಮಧ್ಯರಾತ್ರಿ ಎದ್ದು ನಮ್ಮ ಜಿಲ್ಲೆ ಬಿಟ್ಟು ಹೋಗಬೇಡಿ ಎಂದು ಮನವಿ ಮಾಡಿಕೊಂಡರು. ಜೊತೆಗೆ ಉತ್ತರ ಕರ್ನಾಟಕದಲ್ಲಿರುವ ಸಂಬಂಧಿಕರು ಆತಂಕಪಡುವ ಅಗತ್ಯವಿಲ್ಲ ಎಂದರು.

Leave a Reply