ಉಡುಪಿ: ದೇಶಾದ್ಯಂತ ಕೊರೊನಾ ಲಾಕ್ ಡೌನ್ ಘೋಷಣೆಯಾಗಿದೆ. ಉಡುಪಿ ಜಿಲ್ಲೆಯಾದ್ಯಂತ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ. ಆದರೂ ಜನ ಸುತ್ತಾಡುತ್ತಿದ್ದು, ಹೀಗಾಗಿ ಸುತ್ತಾಡುವವರ ವಾಹನ ಸೀಜ್ ಮಾಡಿ ಜಿಲ್ಲಾಧಿಕಾರಿ ಕೇಸ್ ದಾಖಲು ಮಾಡಿದ್ದಾರೆ.
ಬೆಳಗ್ಗೆ 7 ಗಂಟೆಯಿಂದ 11 ಗಂಟೆ ತನಕ ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲಾಡಳಿತ ವಿನಾಯಿತಿ ಕೊಟ್ಟಿದೆ. ಆದರೂ ಆ ಸಂದರ್ಭ ಮತ್ತು ಆ ಬಳಿಕ ಅನಗತ್ಯವಾಗಿ ನಗರದಾದ್ಯಂತ ಜನ ಓಡಾಡುತ್ತಿದ್ದಾರೆ. ಈ ಬಗ್ಗೆ ಎಸ್ಪಿ ಮತ್ತು ಡಿಸಿಗೆ ಸಾಕಷ್ಟು ದೂರುಗಳು ಬಂದಿತ್ತು. ಈ ಹಿನ್ನೆಲೆಯಲ್ಲಿ ಉಡುಪಿ ಡಿಸಿ ಜಿ ಜಗದೀಶ್ ಮತ್ತು ಎಸ್ಪಿ ವಿಷ್ಣುವರ್ಧನ್ ಬೀದಿಗಿಳಿದರು.

ಉಡುಪಿ ನಗರದ ಕಲ್ಸಂಕ ಜಂಕ್ಷನ್ ನಲ್ಲಿ ಚೆಕ್ ಪೋಸ್ಟ್ ನಲ್ಲಿ ವಾಹನಗಳನ್ನು ತಡೆ ಹಿಡಿದು ವಿಚಾರಿಸಿದರು. ಸುಮ್ಮನೆ ಸಬೂಬು ಹೇಳಿಕೊಂಡು ತಿರುಗಾಡುತ್ತಿದ್ದ ಕಾರು, ಆಟೋ, ಬೈಕ್ ಗಳನ್ನು ಸೀಜ್ ಮಾಡಲಾಯಿತು. ಕಫದ ಸಿರಪ್ ಗಾಗಿ ನಗರದ ಮೆಡಿಕಲ್ ಗಳ ಬಳಿ ಬರುವವರನ್ನು ಜಿಲ್ಲಾಧಿಕಾರಿಗಳು ತರಾಟೆಗೆ ತೆಗೆದುಕೊಂಡರು. ದ್ವಿಚಕ್ರ ವಾಹನದಲ್ಲಿ ಡಬಲ್ ರೈಡ್ ಇದ್ದರೆ ಒಬ್ಬರನ್ನು ಕಳುಹಿಸಿದ್ದಾರೆ. ಕಾರುಗಳಲ್ಲಿ ಇಬ್ಬರಿಗೆ ಮಾತ್ರ ಅವಕಾಶ ಎಂಬುದು ಸರ್ಕಾರದ ಕಾನೂನು. ಕಾನೂನು ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಡಿಸಿ ಆದೇಶ ನೀಡಿದ್ದಾರೆ.

ಜಿಲ್ಲೆಯಲ್ಲಿ ಹೊಸ ಪಾಸಿಟಿವ್ ಕೇಸ್ ಇಲ್ಲ ಎಂದು ಪರಿಸ್ಥಿತಿಯ ಲಾಭ ಪಡೆದುಕೊಳ್ಳುವ ಅಗತ್ಯ ಇಲ್ಲ. ಸ್ವಲ್ಪ ಎಚ್ಚರ ತಪ್ಪಿದರೂ ಮುಂದೆ ದೊಡ್ಡ ಅನಾಹುತವಾಗಬಹುದು ಜಿಲ್ಲಾಡಳಿತದ ಜೊತೆ ಆರಂಭದ ದಿನದಿಂದಲೂ ಉಡುಪಿಯ ಸಾರ್ವಜನಿಕರು ಬೆಂಬಲವಾಗಿ ನಿಂತಿದ್ದಾರೆ. ಇದನ್ನು ಮುಂದುವರಿಸಿ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾನವಿ ಮಾಡಿದರು.

ಉಡುಪಿ ಎಸ್ಪಿ ವಿಷ್ಣುವರ್ಧನ್ ಮಾತನಾಡಿ, ಜಿಲ್ಲಾದ್ಯಂತ 600 ವಾಹನಗಳನ್ನು ಸೀಜ್ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಲಾಕ್ ಡೌನ್ ಮುಗಿಯುವ ತನಕ ವಾಹನಗಳನ್ನು ವಾಪಸ್ ಮಾಡುವುದಿಲ್ಲ. ದಂಡವನ್ನು ಕೂಡ ಹಾಕುತ್ತೇವೆ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು.


Leave a Reply