ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಭಾಸ್ಕರ ಶೆಟ್ಟಿ ಕೊಲೆ ಆರೋಪಿಗಳು ಕೋರ್ಟ್ ಗೆ ಹಾಜರ್

ಉಡುಪಿ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ವಿಚಾರಣೆ ನಡೆದಿದ್ದು, ಕೊಲೆ ಮತ್ತು ಹೋಮಕುಂಡದಲ್ಲಿ ಸುಟ್ಟ ಪ್ರಕರಣದ ಪ್ರಮುಖ ಆರೋಪಿಗಳನ್ನು ಇಂದು ಉಡುಪಿ ಜಿಲ್ಲಾ ಕೋರ್ಟ್ ಗೆ ಹಾಜರುಪಡಿಸಲಾಯಿತು.

ಕೊಲೆಯಾದ ಉದ್ಯಮಿ ಭಾಸ್ಕರ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ, ಪುತ್ರ ನವನೀತ್ ಶೆಟ್ಟಿ ಮತ್ತು ರಾಜೇಶ್ವರಿಯ ಪ್ರಿಯಕರ ನಿರಂಜನ್ ಭಟ್ ನನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಭಾರೀ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಕೋರ್ಟ್ ಆವರಣದ ಮುಂಭಾಗ ಸಶಸ್ತ್ರ ಮೀಸಲು ಪಡೆ ಪೊಲೀಸರನ್ನು ನಿಯೋಜಿಸಲಾಗಿತ್ತು.

ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಕೋರ್ಟ್ ಒಳಗಡೆ ಪ್ರವೇಶಕ್ಕೆ ಅನುಮತಿ ನೀಡಲಾಯಿತು. ನ್ಯಾಯಾಲಯ ಒಳಗಡೆ ಲೋಹ ಶೋಧಕ ಅಳವಡಿಕೆ ಜೊತೆ ವರದಿಗಾರರಿಗೂ ಕೋರ್ಟ್ ಹಾಲ್ ಒಳಗೆ ನಿರ್ಬಂಧ ಹೇರಲಾಗಿತ್ತು. ಆರೋಪಿಗಳ ವಿಚಾರಣೆ ಇರುವುದರಿಂದ ನ್ಯಾಯಾಲಯಕ್ಕೆ ಭಾಸ್ಕರ ಶೆಟ್ಟಿ ತಾಯಿ ಗುಲಾಬಿ ಶೆಟ್ಟಿ ಆಗಮಿಸಿದರು.

ಏನಿದು ಪ್ರಕರಣ: ಹಣಕಾಸಿನ ವಿಚಾರದಲ್ಲಿ ನಡೆದ ಜಗಳದಲ್ಲಿ 2016 ಜುಲೈ 28 ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆಯಾಗಿತ್ತು. ಪತ್ನಿ ಹಾಗೂ ಪುತ್ರ ಇಬ್ಬರು ಸೇರಿ ಭಾಸ್ಕರ ಶೆಟ್ಟಿಯನ್ನು ಕೊಲೆಗೈದಿದ್ದರು. ಈ ಕೃತ್ಯಕ್ಕೆ ಪ್ರಿಯತಮ ನಿರಂಜನ ಭಟ್ ಸಾಥ್ ನೀಡಿ ನಂದಳಿಕೆಯ ತನ್ನ ಹೋಮಕುಂಡದಲ್ಲಿ ಭಾಸ್ಕರ ಶೆಟ್ಟಿ ಹೆಣವನ್ನು ಸುಟ್ಟಿದ್ದರು.

ಆರೋಪಿಗಳ ಪರ ನಾರಾಯಣ ಪೂಜಾರಿ ಹಾಗೂ ವಿಕ್ರಂ ಹೆಗ್ಡೆ ವಕಾಲತ್ತು ಮಾಡಲಿದ್ದಾರೆ. ಭಾಸ್ಕರ ಶೆಟ್ಟಿ ತಾಯಿ ಪರ ಹಿರಿಯ ಕ್ರಿಮಿನಲ್ ವಕೀಲ ಶಾಂತಾರಾಮ್ ಶೆಟ್ಟಿ ವಾದ ಮಾಡಲಿದ್ದಾರೆ. ಇನ್ನು ಮೂರು ದಿನಗಳ ಕಾಲ ಉಡುಪಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.

Comments

Leave a Reply

Your email address will not be published. Required fields are marked *