ಕೋರ್ಟ್ ನಲ್ಲಿ ತೀರ್ಪು ಪ್ರಕಟವಾಗ್ತಿದ್ದಂತೆಯೇ ವಿಶೇಷ ಸರ್ಕಾರಿ ಅಭಿಯೋಜಕರಿಗೆ ಶೂ ಎಸೆದ!

ಉಡುಪಿ: ಅತ್ಯಾಚಾರ ಪ್ರಕರಣದ ಆರೋಪಿಯೊಬ್ಬ ಉಡುಪಿಯ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿಯೇ ಶೂ ಎಸೆದ ಕಳವಳಕಾರಿ ಘಟನೆ ನಡೆದಿದೆ.

ಐದು ವರ್ಷಗಳ ಹಿಂದೆ ಕುಂದಾಪುರ ತಾಲೂಕಿನಲ್ಲಿ ಹದಿನೈದರ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆದಿತ್ತು. ಬಳಿಕ ತನಿಖೆಯಿಂದ ಬ್ರಹ್ಮಾವರದ ಪ್ರಶಾಂತ ಕುಲಾಲ್ ಆರೋಪಿಯೆಂದು ಬೆಳಕಿಗೆ ಬಂತು. ಕೂಡಲೇ ಈತನನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನಿನಿಂದ ಈತ ಬಿಡುಗಡೆ ಹೊಂದಿದ್ದು, ವಿಚಾರಣೆ ನಡೆಯುತ್ತಿತ್ತು. ಆ ಬಳಿಕವೂ ಈತ ಒಂದು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.

ಗುರುವಾರ ಸಂಜೆ ಅಪ್ರಾಪ್ತೆಯ ಅತ್ಯಾಚಾರ ಪ್ರಕರಣದ ತೀರ್ಪು ಹೊರಬೀಳಬೇಕಿತ್ತು. ಈ ವೇಳೆ ಈತನ ಅಪರಾಧಿ ಹಿನ್ನೆಲೆಯನ್ನು ಉಲ್ಲೇಖಿಸಿದ ವಿಶೇಷ ಸರ್ಕಾರಿ ಅಭಿಯೋಜಕ ವಿಜಯ್ ವಾಸು ಪೂಜಾರಿ ಅವರು ಈತನಿಗೆ ಕಠಿಣ ಶಿಕ್ಷೆ ನೀಡುವಂತೆ ವಾದಿಸಿದ್ದರು. ತೀರ್ಪು ನೀಡಿದ ನ್ಯಾಯಾಧೀಶರು 20 ವರ್ಷ ಜೈಲು ಹಾಗೂ 25 ಸಾವಿರ ದಂಡ ವಿಧಿಸಿದ್ದರು.

ತೀರ್ಪು ಪ್ರಕಟವಾಗುತ್ತಿದ್ದಂತೆ ಕೋಪಗೊಂಡ ಪ್ರಶಾಂತ್ ತನ್ನ ಎರಡೂ ಕಾಲುಗಳ ಶೂ ತೆಗೆದು ನ್ಯಾಯಾಧೀಶರ ಸಮ್ಮುಖದಲ್ಲಿದ್ದ ವಿಶೇಷ ಸರ್ಕಾರಿ ಅಭಿಯೋಜಕ ವಿಜಯ್ ವಾಸು ಪೂಜಾರಿಯತ್ತ ಎಸೆದಿದ್ದಾನೆ. ಅವರು ಅದೃಷ್ಟವಶಾತ್ ಏಟಿನಿಂದ ತಪ್ಪಿಸಿಕೊಂಡಿದ್ದು, ಇದು ನ್ಯಾಯಾಲಯವನ್ನು ಅವಮಾನಿಸಿದ ಪ್ರಕರಣವಾಗಿದೆ.

ಪ್ರಶಾಂತ್ ವಿರುದ್ಧ ಈ ಬಗ್ಗೆ ಶುಕ್ರವಾರ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಗೂ ಕೋರಿಕೆಯ ಮೇರೆಗೆ ವಿಜಯ್ ವಾಸು ಪೂಜಾರಿ ಅವರಿಗೆ ಭದ್ರತೆ ನೀಡಲಾಗಿದೆ.

Comments

Leave a Reply

Your email address will not be published. Required fields are marked *