ಈಗಲೂ ಸಿದ್ಧಾಂತದ ಜೊತೆಗಿದ್ದೇನೆ, ಹಿಂದುತ್ವ ಬಿಡಲ್ಲ- ಉದ್ಧವ್ ಠಾಕ್ರೆ

ಮುಂಬೈ: ಈಗಲೂ ನಾನು ಸಿದ್ಧಾಂತಕ್ಕೆ ಬದ್ಧನಾಗಿದ್ದೇನೆ ಹಿಂದುತ್ವ ತೊರೆಯುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್‍ನ ನಾನಾ ಪಾಟೋಲೆ ಅವರು ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಸದನದಲ್ಲಿ ಠಾಕ್ರೆ ಮಾತನಾಡಿದರು. ನಾನು ಈಗಲೂ ಹಿಂದುತ್ವದ ಸಿದ್ಧಾಂತಕ್ಕೆ ಬದ್ಧನಾಗಿದ್ದೇನೆ. ಅದನ್ನು ಎಂದೂ ಬಿಡುವುದಿಲ್ಲ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಕಳೆದ ಬಾರಿಯ ಸರ್ಕಾರದ ಸಂದರ್ಭದಲ್ಲಿ ನಾನೆಂದೂ ದ್ರೋಹ ಮಾಡಿಲ್ಲ. ಅಲ್ಲದೆ ನಾನು ಹಾಗೂ ದೇವೇಂದ್ರ ಫಡ್ನವಿಸ್ ಉತ್ತಮ ಸ್ನೇಹಿತರು. ಬಹಳ ಸಮಯದಿಂದ ನಾವಿಬ್ಬರೂ ಸ್ನೇಹಿತರಾಗಿದ್ದೆವು ಎಂದು ಹೇಳಲು ನಾನು ಹಿಂಜರಿಯುವುದಿಲ್ಲ ಎಂದರು.

ಅದೃಷ್ಟದಿಂದಾಗಿ ನಾನು ಮುಖ್ಯಮಂತ್ರಿಯಾಗಿದ್ದೇನೆ. ಏಕೆಂದರೆ ಯಾರು ನನ್ನನ್ನು ವಿರೋಧಿಸುತ್ತಿದ್ದರೋ ಇಂದು ಅವರು ನನ್ನೊಂದಿಗಿದ್ದಾರೆ. ಯಾರು ಜೊತೆಗಿದ್ದರೋ ಅವರೀಗ ನನ್ನ ಎದುರಿದ್ದಾರೆ. ಹೀಗಾಗಿ ನಾನು ಅದೃಷ್ಟ ಹಾಗೂ ಜನರ ಆಶೀರ್ವಾದದಿಂದಾಗಿ ಮುಖ್ಯಮಂತ್ರಿ ಹುದ್ದೆ ಏರಿದ್ದೇನೆ. ಈ ಸ್ಥಾನಕ್ಕೇರುತ್ತೇನೆ ಎಂದು ಯಾರೂ ಭಾವಿಸಿರಲಿಲ್ಲ. ಆದರೆ ಬಂದಿದ್ದೇನೆ ಎಂದು ಹೇಳಿದರು.

ನಾನು ಸದನಕ್ಕೆ ಹಾಗೂ ಮಹಾರಾಷ್ಟ್ರ ಜನತೆಗೆ ಭರವಸೆ ನೀಡುತ್ತೇನೆ. ರಾತ್ರೋ ರಾತ್ರಿ ಏನೋ ಮಾಡಿಬಿಡುತ್ತೇನೆ ಎಂದು ಹೇಳುವುದಿಲ್ಲ. ಆದರೆ ಜನತೆಯ ಹಿತಾಸಕ್ತಿಗಾಗಿ ಕೆಲಸ ಮಾಡುತ್ತೇನೆ ಎಂದರು.

ಉದ್ಧವ್ ಠಾಕ್ರೆ ಅವರು ಶನಿವಾರವಷ್ಟೆ ವಿಶ್ವಾಸ ಮತವೆಂಬ ಅಗ್ನಿ ಪರೀಕ್ಷೆಯನ್ನು ಗೆದ್ದಿದ್ದಾರೆ. ಮಹಾರಾಷ್ಟ್ರ ರಾಜಕಾರಣದ ಕುರಿತು ಇಡೀ ದೇಶವೇ ಚರ್ಚೆಯಲ್ಲಿ ಮುಳುಗಿತ್ತು. ಈ ಎಲ್ಲ ಚರ್ಚೆಗಳ ಮಧ್ಯೆ ಉದ್ಧವ್ ಠಾಕ್ರೆ ಗುರುವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಶನಿವಾರ ಭಾರೀ ಗದ್ದಲ ಹಾಗೂ ಬಿಜೆಪಿಯ ಸಭಾತ್ಯಾಗದ ಮಧ್ಯೆ ಠಾಕ್ರೆ ವಿಶ್ವಾಸ ಮತ ಸಾಬೀತು ಪಡಿಸಿದ್ದರು. ಈ ಮೂಲಕ ಉದ್ಧವ್ ನೇತೃತ್ವದ ಮೈತ್ರಿ ಸರ್ಕಾರ ಅಗ್ನಿ ಪರೀಕ್ಷೆಯನ್ನು ಗೆದ್ದಿತ್ತು.

ಗುರುವಾರ ಉದ್ಧವ್ ಠಾಕ್ರೆ ಪ್ರಮಾಣ ವಚನ ಸ್ವೀಕರಿಸುವ ಮೂಲಕ `ಮಹಾವಿಕಾಸ್ ಅಘಾಡಿ’ ಸರ್ಕಾರ ರಚನೆಯಾಗಿದೆ. ಮುಂಬೈನ ಶಿವಾಜಿ ಪಾರ್ಕಿನಲ್ಲಿ ಸಂಜೆ 6.30ಕ್ಕೆ ಅದ್ಧೂರಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಶಿವಾಜಿ ಸಾಕ್ಷಿಯಾಗಿ, ಸಾವಿರಾರು ಶಿವಸೈನಿಕರ ಸಮ್ಮುಖದಲ್ಲಿ ಮಹಾರಾಷ್ಟ್ರದ 19ನೇ ಸಿಎಂ ಆಗಿ ಉದ್ಧವ್ ಪ್ರಮಾಣವಚನ ಸ್ವೀಕರಿಸಿದ್ದರು. ಈ ಮೂಲಕ ಸುಮಾರು 40 ವರ್ಷಗಳ ಶಿವಸೇನೆಯ ರಾಜಕೀಯ ಇತಿಹಾಸದಲ್ಲಿ ಠಾಕ್ರೆ ಕುಟುಂಬದ ಮೊದಲ ಕುಡಿಯಾಗಿ ಉದ್ಧವ್ ಮುಖ್ಯಮಂತ್ರಿ ಸ್ಥಾನವನ್ನು ಏರಿದ್ದಾರೆ.

ಉದ್ಧವ್ ಠಾಕ್ರೆ ಅವರೊಂದಿಗೆ ಮೂರು ಪಕ್ಷಗಳ ಹಿರಿಯ, ಅನುಭವಸ್ಥರಾದ ಶಿವಸೇನೆಯ ಏಕನಾಥ್ ಶಿಂಧೆ, ಸುಭಾಶ್ ದೇಸಾಯಿ, ಎನ್‍ಸಿಪಿಯ ಜಯಂತ್ ಪಾಟೀಲ್, ಛಗನ್ ಭುಜ್ಬಲ್ ಹಾಗೂ ಕಾಂಗ್ರೆಸ್ ಅಧ್ಯಕ್ಷ ಬಾಳಾ ಸಾಹೇಬ್ ಥೋರಟ್, ದಲಿತ ನಾಯಕ ನಿತಿನ್ ರಾವತ್ ಪ್ರಮಾಣ ವಚನ ಸ್ವೀಕರಿಸಿದರು. ಉಪಮುಖ್ಯಮಂತ್ರಿಯಾಗಿ ಯಾರೊಬ್ಬರೂ ಪ್ರಮಾಣ ವಚನ ಸ್ವೀಕರಿಸಿರಲಿಲ್ಲ.

Comments

Leave a Reply

Your email address will not be published. Required fields are marked *