ಮತ್ತೆ ಒಂದಾಗ್ತಾರಾ ಉದ್ಧವ್, ರಾಜ್ ಠಾಕ್ರೆ? – ಆ ಫೋಟೋ ಮೂಡಿಸಿತು ಕುತೂಹಲ

ಮುಂಬೈ: ಮಾಜಿ ಸಿಎಂ ಉದ್ಧವ್‌ ಠಾಕ್ರೆ (Uddhav Thackeray) ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನಾ (MNS) ಮುಖ್ಯಸ್ಥ ರಾಜ್ ಠಾಕ್ರೆ (Raj Thackeray ) ಒಂದಾಗುತ್ತಾರಾ ಎಂಬ ಪ್ರಶ್ನೆ ಈಗ ಎದ್ದಿದೆ. ಇಬ್ಬರೂ ನಾಯಕರು ಪರಸ್ಪರ ಉಭಯ ಕುಶಲೋಪರಿ ನಡೆಸುತ್ತಿರುವ ಫೋಟೋ ವೈರಲ್‌ ಆಗುತ್ತಿದ್ದಂತೆ ಈ ಪ್ರಶ್ನೆ ಈಗ ಎದ್ದಿದೆ.

ಭಾನುವಾರ ರಾತ್ರಿ ಮುಂಬೈನ ಅಂಧೇರಿಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಇಬ್ಬರೂ ನಾಯಕರು ಭೇಟಿಯಾಗಿ ಮಾತನಾಡಿದರು. ಮುಂದೆ ನಡೆಯಲಿರುವ ನಗರ ಪಾಲಿಕೆ ಚುನಾವಣೆ ಸಮಯದಲ್ಲೇ ಇಬ್ಬರು ನಾಯಕರ ಭೇಟಿ ಮಹತ್ವ ಪಡೆದಿದೆ.

ಅಂಧೇರಿಯಲ್ಲಿ ಮೊದಲ ಬಾರಿಗೆ ಇಬ್ಬರು ಭೇಟಿಯಾಗಿಲ್ಲ. ಕಳೆದ ಮೂರು ತಿಂಗಳಿನಲ್ಲಿ ಮೂರನೇ ಬಾರಿ ನಡೆದ ಭೇಟಿ ಇದಾಗಿದೆ. ಇಬ್ಬರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಒಂದಾಗುತ್ತಾರಾ ಎಂಬ ವದಂತಿ ಹಬ್ಬಲು ಆರಂಭವಾಗಿದೆ. ಇದನ್ನೂ ಓದಿ: ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ತಲುಪಲು 15 ನಿಮಿಷ ತಡವಾಗಿ ಬಂದ ಮೋದಿ!

ಉದ್ದವ್‌ ಮತ್ತು ರಾಜ್‌ ಠಾಕ್ರೆ ಇಬ್ಬರೂ ಸೋದರ ಸಂಬಂಧಿಗಳು. ಬಾಳಾ ಠಾಕ್ರೆಯ ಸಹೋದರ ಶ್ರೀಕಾಂತ್ ಠಾಕ್ರೆಯ ಪುತ್ರನಾಗಿರುವ ರಾಜ್‌ ಆರಂಭದಲ್ಲಿ ಜೊತೆಯಾಗಿಯೇ ಶಿವಸೇನೆಯಲ್ಲಿ (Shiv Sena) ಕೆಲಸ ಮಾಡಿದ್ದರು. ಬಾಳಾ ಠಾಕ್ರೆ (Bal Thackeray) ಅವರ ಹಲವರು ಕಾರ್ಯಕ್ರಮಗಳನ್ನು ರಾಜ್‌ ಠಾಕ್ರೆ ಆಯೋಜಿಸುತ್ತಿದ್ದರು.

ಪಕ್ಷಕ್ಕೆ ಒಟ್ಟಾಗಿ ಕೆಲಸ ಮಾಡುತ್ತಿದ್ದರೂ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ 2005ರಲ್ಲಿ ಶಿವಸೇನೆಗೆ ರಾಜೀನಾಮೆ ನೀಡಿದ್ದ ರಾಜ್‌ ಮಾರ್ಚ್ 9, 2006 ರಂದು ಮುಂಬೈನಲ್ಲಿ ಎಂಎನ್‌ಎಸ್ ಘೋಷಿಸಿದ್ದರು.

ಏಕನಾಥ್ ಶಿಂಧೆ ಶಿವಸೇನೆಯಿಂದ ಹೊರ ಬಂದು ಪ್ರತ್ಯೇಕ ಶಿವಸೇನೆ ರಚಿಸಿದಾಗ ರಾಜ್ ಠಾಕ್ರೆ ಉದ್ಧವ್‌ ಅವರನ್ನು ಟೀಕಿಸಿದ್ದರು. ಹಲವಾರು ಬಾರಿ ಉದ್ಧವ್‌ ಮತ್ತು ರಾಜ್‌ ಠಾಕ್ರೆ ಮಧ್ಯೆ ವಾಗ್ದಾಳಿ ನಡೆದಿತ್ತು. ಆದರೆ ಈಗ ಇಬ್ಬರು ಭಿನ್ನಾಭಿಪ್ರಾಯ ಮರೆತು ಒಂದಾಗುತ್ತಾರಾ ಎಂಬ ಪ್ರಶ್ನೆಗೆ ಮುಂದಿನ ಕೆಲ ತಿಂಗಳಿನಲ್ಲಿ ಉತ್ತರ ಸಿಗಲಿದೆ.