ಬಾರಾಮುಲ್ಲಾದಲ್ಲಿ ಎನ್‌ಕೌಂಟರ್‌ಗೆ ಇಬ್ಬರು ಉಗ್ರರ ಹತ್ಯೆ – ಜಮ್ಮುವಿನಲ್ಲಿ ಹೈ ಅಲರ್ಟ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಬಾರಾಮುಲ್ಲಾ (Baramulla) ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು (Terrorists) ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಇದು 2ನೇ ಎನ್‌ಕೌಂಟರ್ ಆಗಿದೆ. ಮುಂದಿನ ಕೆಲವು ದಿನಗಳಲ್ಲಿ ಭಯೋತ್ಪಾದಕರು ದೊಡ್ಡ ಮಟ್ಟದ ದಾಳಿಗೆ ತಯಾರಿ ನಡೆಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಹೈ ಅಲರ್ಟ್ ಆಗಿದ್ದಾರೆ.

ವನಿಗಮ್ ಗ್ರಾಮದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಖಚಿತ ಮಾಹಿತಿಯನ್ನು ಪಡೆದು ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಬಳಿಕ ಬಾರಾಮುಲ್ಲಾ ಜಿಲ್ಲೆಯ ಕ್ರೀರಿ ಪ್ರದೇಶದಲ್ಲಿ ಇಬ್ಬರು ಭಯೋತ್ಪಾದಕರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಬಜರಂಗಿ ಸಂಘರ್ಷ – ಬೆಳಗ್ಗೆಯಿಂದಲೇ ದೇವಸ್ಥಾನಗಳಲ್ಲಿ ಮೊಳಗಲಿದೆ ಹನುಮಾನ್ ಚಾಲೀಸಾ

ಎನ್‌ಕೌಂಟರ್ ನಡೆಸಿದ ಪ್ರದೇಶದಿಂದ ಒಂದು ಎಕೆ ರೈಫಲ್ ಮತ್ತು ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಹತ್ಯೆಯಾದ ಭಯೋತ್ಪಾದಕರ ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಬುಧವಾರ ಕುಪ್ವಾರ ಜಿಲ್ಲೆಯ ಮಚಿಲ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯಲ್ಲಿ ಒಳ ನುಸುಳಲು ಪ್ರಯತ್ನಿಸುತ್ತಿದ್ದ ಇಬ್ಬರು ಅಪರಿಚಿತ ಭಯೋತ್ಪಾದಕರನ್ನು ಸೇನೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಹತ್ಯೆ ನಡೆಸಿದ್ದಾರೆ. ಭಯೋತ್ಪಾದಕರು ಈ ಪ್ರದೇಶದಲ್ಲಿ ಕೆಲವು ಪ್ರಮುಖ ದಾಳಿಗೆ ತಯಾರಿ ನಡೆಸುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿಯ ಹಿನ್ನೆಲೆ ಜಮ್ಮುವಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ಯತ್ನಾಳ್‌, ಪ್ರಿಯಾಂಕ್‌ ಖರ್ಗೆಗೆ ಶೋಕಾಸ್‌ ನೋಟಿಸ್‌ ಜಾರಿ