ಹೈದರಾಬಾದ್‌ನಲ್ಲಿ ಬಾಂಬ್ ಬ್ಲಾಸ್ಟ್ ಮಾಡಲು ಸಂಚು – ಇಬ್ಬರು ಶಂಕಿತ ಉಗ್ರರ ಬಂಧನ

ಹೈದರಾಬಾದ್: ತೆಲಂಗಾಣ ಹಾಗೂ ಆಂಧ್ರ ಪ್ರದೇಶ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಹೈದರಾಬಾದ್‌ನಲ್ಲಿ (Hyderabad)  ಬಾಂಬ್ ಬ್ಲಾಸ್ಟ್ ಮಾಡಲು ಸಂಚು ರೂಪಿಸಿದ್ದ ಇಬ್ಬರು ಶಂಕಿತ ಉಗ್ರರನ್ನು (Suspected Terrorists) ಬಂಧಿಸಿದ್ದಾರೆ.

ವಿಜಯನಗರದ ಸಿರಾಜ್ ಮತ್ತು ಹೈದರಾಬಾದ್‌ನ ಸಮೀರ್ ಬಂಧಿತರು. ಯೋಜನೆಯ ಭಾಗವಾಗಿ ಸಿರಾಜ್ ವಿಜಯನಗರದಲ್ಲಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿದ್ದ. ಸೌದಿ ಅರೇಬಿಯಾ ಮೂಲದ ಐಸಿಸ್ ಮಾಡ್ಯೂಲ್ ಇವರಿಗೆ ಹೈದರಾಬಾದ್‌ನಲ್ಲಿ ದಾಳಿ ನಡೆಸಲು ಮಾರ್ಗದರ್ಶನ ನೀಡುತ್ತಿದ್ದ. ಆಂಧ್ರಪ್ರದೇಶದ ವಿಜಯನಗರದಲ್ಲಿ ಸಿರಾಜ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ಇನ್ನೋರ್ವ ಶಂಕಿತ ಉಗ್ರನ ಬಗ್ಗೆ ಸಿರಾಜ್ ಬಾಯ್ಬಿಟ್ಟಿದ್ದಾನೆ. ಬಳಿಕ ಪೊಲೀಸರು ಸಮೀರ್‌ನನ್ನು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಏರೋಸ್ಪೇಸ್ ಎಂಜಿನಿಯರ್ ಸಾವು ಕೇಸ್‌ಗೆ ಟ್ವಿಸ್ಟ್ – 2 ಮಕ್ಕಳ ತಂದೆಯೊಂದಿಗೆ ಪ್ರೇಮ ವೈಫಲ್ಯ

ಶಂಕಿತ ಉಗ್ರರು ಅಲ್ ಹಿಂದ್ ಇತ್ತೆಹಾದುಲ್ ಮುಸ್ಲಿಮೀನ್ ಸಂಘಟನೆ ನಡೆಸುತ್ತಿದ್ದರು. ಸಮೀರ್ ಇಂಜಿನಿಯರಿಂಗ್ ಮುಗಿಸಿ, ಲಿಫ್ಟ್ ಆಪರೇಟಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಶಂಕಿತರು ಬ್ಲಾಸ್ಟ್‌ ಸಲುವಾಗಿ ಪೊಟ್ಯಾಸಿಯಮ್ ಕ್ಲೊರೇಡ್ ಹಾಗೂ ಸಲ್ಫರ್‌ನಂತಹ ರಾಸಾಯನಿಕಗಳನ್ನು ಆನ್ಲೈನ್‌ನಲ್ಲಿ ಆರ್ಡರ್ ಮಾಡಿದ್ದರು. ಈ ತಿಂಗಳು 21-22 ರಂದು ವಿಜಯನಗರ ಪ್ರದೇಶದಲ್ಲಿ ಪೂರ್ವಭ್ಯಾಸಕ್ಕೆ ತಯಾರಿ ಮಾಡಿಕೊಂಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಾನ್ಯತಾ ಟೆಕ್‌ ಪಾರ್ಕ್‌ ಜಲಾವೃತ – ಪರ್ಯಾಯ ಮಾರ್ಗ ಬಳಸುವಂತೆ ಮನವಿ

ಶಂಕಿತ ಉಗ್ರರ ಮನೆಯಿಂದ ಅಮೋನಿಯಾ, ಸಲ್ಫರ್ ಮತ್ತು ಅಲ್ಯೂಮಿನಿಯಂ ಪುಡಿ ಸೇರಿದಂತೆ ಸ್ಫೋಟಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಇಬ್ಬರು ಶಂಕಿತ ಉಗ್ರರನ್ನು ಶೀಘ್ರದಲ್ಲೇ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮುಂದಿನ ನಾಲ್ಕು ದಿನ ರಾಜ್ಯಕ್ಕೆ ಮಳೆ ಎಚ್ಚರಿಕೆ – ಬೆಂಗಳೂರಿಗೆ ಇಂದು ಯೆಲ್ಲೋ ಅಲರ್ಟ್