ಮಡಿಕೇರಿಯಲ್ಲಿ ಮಳೆಗೆ ಮೂರು ಸಾವು- ಇತ್ತ ಜಾರು ಬಂಡಿಯಂತೆ ಜಾರಿ ಹೋಯ್ತು ಕಟ್ಟಡ: ವಿಡಿಯೋ ನೋಡಿ

– ಹೆಲಿಕಾಪ್ಟರ್ ಮೂಲಕ ಸಂತ್ರಸ್ತರ ರಕ್ಷಣೆಗೆ ಯತ್ನ

ಮಡಿಕೇರಿ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಡಿಕೇರಿಯ ಕಾಟಕೇರಿಯಲ್ಲಿ ಮನೆಮೇಲೆ ಗುಡ್ಡ ಕುಸಿದು ಮಣ್ಣಿನಲ್ಲಿ ಸಿಲುಕಿ ಮೂರು ಮಂದಿ ಸಾವನ್ನಪ್ಪಿದ್ದಾರೆ.

ಕೆ.ಎಸ್.ಆರ್.ಪಿ ಪೊಲೀಸ್ ಸಿಬ್ಬಂದಿ ಯಶವಂತ್, ವೆಂಕಟರಮಣ ಮತ್ತು ಪವನ್ ಮೃತದುರ್ದೈವಿಗಳು. ಯಶವಂತ್ 3 ತಿಂಗಳಿನಿಂದ ಕೊಡಗು ಭಾಗಮಂಡಲ ಎ.ಎನ್.ಎಫ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮನೆಯ ಮೇಲೆ ಮಣ್ಣು ಕುಸಿದ ಹಿನ್ನೆಲೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ಗುಡ್ಡ ಕುಸಿತದಿಂದ ಮಳೆಗೆ ಮಡಿಕೇರಿಯ ಮಲ್ಲಿಕಾರ್ಜುನ ನಗರದಲ್ಲಿ ಹನೀಫ್ ಎಂಬವರ ಮನೆಯೊಂದು ಜಾರುಬಂಡಿಯಂತೆ ಜಾರಿ ಹೋಗಿದೆ. ಹಾರಂಗಿ ಜಲಾಶಯದಿಂದ 90 ಸಾವಿರ ಕ್ಯೂಸೆಕ್ ನೀರು ಹೊರಬಿಟ್ಟಿದ್ದರಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಬದಿಗೆರೆ ಎಂಬಲ್ಲಿ 300ಕ್ಕೂ ಹೆಚ್ಚು ಜನ ಮನೆಬಿಟ್ಟು ಗುಡ್ಡ ಹತ್ತಿದ್ದಾರೆ. ನಿರಂತರ ಮಳೆಯಿಂದಾಗಿ ಹಲವೆಡೆ ಭೂ ಕುಸಿತ ಉಂಟಾಗಿದ್ದು, ವಾಹನ ಸಂಚಾರ ಕಡಿತಗೊಂಡಿದೆ.

ಮಳೆಯ ಅಬ್ಬರಕ್ಕೆ ಕೊಡಗು ಅಕ್ಷರಶಃ ತತ್ತರಿಸಿದೆ. ಪಟ್ಟಣಕ್ಕೆ ಪಟ್ಟಣಗಳೇ ಜಲಾವೃತವಾಗ್ತಿದ್ದು, ಮನೆಗಳಿಗೆ ನೀರು ನುಗ್ಗಿ ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಮಳೆಯ ಅಬ್ಬರಕ್ಕೆ ಗುಡ್ಡ ಕುಸಿತ, ಸೇತುವೆ ಮೇಲೆ ನೀರು, ರಸ್ತೆ ಕುಸಿದಂತಹ ದುರ್ಘಟನೆಗಳು ಹೆಚ್ಚಾಗ್ತಿದ್ದು, ಕೊಡಗು ಜಿಲ್ಲೆ ಹೊರಜಗತ್ತಿನ ಸಂಪರ್ಕ ಕಳೆದುಕೊಳ್ಳುತ್ತಿದೆ.

ರಾಮ, ಲಕ್ಷ್ಮಣ ತೀರ್ಥ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಭಗಂಡೇಶ್ವರ ಕ್ಷೇತ್ರ ಮತ್ತೊಮ್ಮೆ ಜಲಾವೃತಗೊಂಡಿದೆ. ಸಂತ್ರಸ್ತರನ್ನು ಸೇನಾ ಹೆಲಿಕಾಪ್ಟರ್‍ನಲ್ಲಿ ರಕ್ಷಣೆ ಮಾಡಲಾಗುತ್ತಿದೆ. ಕರ್ನಾಟಕದಲ್ಲೂ ಮಳೆಯಬ್ಬರ ಸದ್ಯಕ್ಕೆ ನಿಲ್ಲೋ ರೀತಿ ಕಾಣಿಸುತ್ತಿಲ್ಲ. ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಇವತ್ತು ಮತ್ತು ಶುಕ್ರವಾರ ರೈನ್ ರೆಡ್ ಅಲರ್ಟ್ ಘೋಷಿಸಲಾಗಿದೆ.

Comments

Leave a Reply

Your email address will not be published. Required fields are marked *